
ಕನ್ನಡಪ್ರಭ ವಾರ್ತೆ ವಿಜಯಪುರ
ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೆಪ್ಟೆಂಬರ್ 18 ರಿಂದ ಜನವರಿ 1 ರವರೆಗೆ 106 ದಿನಗಳ ಕಾಲ ಶಾಂತಿಯುತವಾಗಿ ಹೋರಾಟ ನಡೆದಿತ್ತು. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ಸರ್ಕಾರದ ಉದ್ದೇಶಿತ ಪಿಪಿಪಿ ಮಾದರಿಯ ಖಾಸಗೀಕರಣ ವೈದ್ಯಕೀಯ ಮಹಾವಿದ್ಯಾಲಯದ ವಿರೋಧಿಸಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಹಾಗೂ ಪಕ್ಷಾತೀತ ಮುಖಂಡರು ಧರಣಿ ನಡೆಸುತ್ತಿದ್ದರು. ಜ.1ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಜ.2ರಂದು ಸಚಿವ ಶಿವಾನಂದ ಪಾಟೀಲ, ಜ.3ರಂದು ನಗರ ಶಾಸಕ ಬಸನಗೌಡ ಆರ್.ಪಾಟೀಲ ಯತ್ನಾಳರ ಮನೆಯಮುಂದೆ ಸಾಂಕೇತಿಕ ಪ್ರತಿಭಟನೆ ಮಾಡಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸುವುದಾಗಿ ಹೋರಾಟಗಾರರು ಮುಂಚಿತವಾಗಿಯೇ ಮಾಹಿತಿ ನೀಡಿದ್ದರು ಎಂದರು.
ಆದರೆ ಜ.1ರಂದು ಸಚಿವ ಎಂ.ಬಿ.ಪಾಟೀಲರ ಮನೆಯ ಮುಂದೆ ಧರಣಿ ಪ್ರಾರಂಭವಾಗುವ ಮೊದಲೇ ಸಾಮಾನ್ಯ ಉಡುಗೆಯಲ್ಲಿದ್ದ ಪೊಲೀಸರು ಏಕಾಏಕಿ ಪ್ರಮುಖ ಹೋರಾಟಗಾರರಾದ ಹುಣಶ್ಯಾಳ ಶ್ರೀ ಸಂಗನಬಸವ ಮಹಾಸ್ವಾಮೀಜಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೊತೆಗೆ ಮಹಿಳೆಯರು ವಯಸ್ಸಾದವರು ಎನ್ನದೆ ಎಲ್ಲ ಹೋರಾಟಗಾರರನ್ನು ರಸ್ತೆಯ ಮೇಲೆ ಎಳದಾಡಿ ಪೊಲೀಸ ವಾಹನದಲ್ಲಿ ಪ್ರಾಣಿಗಳಂತೆ ತುಂಬಿಕೊಂಡು ಹೋಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಜೊತೆಗೆ ಕಾನೂನು ಬದ್ಧವಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೊಲೀಸರು ಹತ್ತಿಕ್ಕಿದ್ದು ಖಂಡನೀಯವಾದುದು ಜೊತೆಗೆ 27 ಜನ ಹೋರಾಟಗಾರರ ಮೇಲೆ ಬಿಎನ್‌ಎಸ್ ಕಾಯ್ದೆಯ ವಿವಿಧ ಪ್ರಕರಣಗಳಡಿ ಮೊಕದ್ದಮೆ ದಾಖಲಿಸಿ 6 ಜನ ಪ್ರಮುಖ ಹೋರಾಟಗಾರರನ್ನು ಜೈಲಿಗೆ ಅಟ್ಟಿದ್ದು ಇಡೀ ಜಿಲ್ಲೆಯ ಜನರಿಗೆ ಮಾಡಿದ ಅನ್ಯಾಯವಾಗಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಕೂಡಲೇ 27 ಜನರ ಹೋರಾಟಗಾರರ ಮೇಲಿನ ಸುಳ್ಳು ಕೇಸಗಳನ್ನು ವಾಪಸ್ ಪಡೆದು ಜೈಲಿನಲ್ಲಿರುವ 6 ಜನಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಅಂಬೇಡ್ಕರ್ ವೃತ್ತದಲ್ಲಿನ ಹೋರಾಟದ ಟೆಂಟ್ ಅನ್ನು ಪುನಃ ಹಾಕಿಕೊಡಬೇಕು ಎಂದು ಆಗ್ರಹಿಸಿದರು.ಆನಂದಕುಮಾರ ಜಂಬಗಿ, ವಿಕಾಸ ಖೇಡ, ಸಾಗರ ಬೇನೂರ, ಎಂ.ಬಿ.ಪಾಟೀಲ, ಅಮೃತ ಪಾಟೀಲ, ಅರ್ಜುನ ಹೊರ್ತಿ, ಪ್ರದೀಪ ಬೆನಕನಳ್ಳಿ, ಅಂಬಣ್ಣ ಝಳಕಿ, ಮೈ.ವೈ.ಬಿರಾದಾರ ಇದ್ದರು.