ಜಪ, ಧ್ಯಾನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ: ಡಾ.ವೀರೇಂದ್ರ ಹೆಗ್ಗಡೆ

KannadaprabhaNewsNetwork |  
Published : May 07, 2024, 01:02 AM IST
ನಾರಾವಿ | Kannada Prabha

ಸಾರಾಂಶ

ಶನಿವಾರ ನಾರಾವಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾಮಹೋತ್ಸವ ಸಂದರ್ಭ ಆಯೋಜಿಸಿದ ಧಾರ್ಮಿಕಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಜಪ, ಧ್ಯಾನದಿಂದ ಮಾನಸಿಕ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಸದಿಗೆ ಹೋಗಿ ದೇವರದರ್ಶನ ಮಾಡಿ, ವ್ರತ-ನಿಯಮಗಳೊಂದಿಗೆ ಜಪ, ತಪ, ಧ್ಯಾನ ಮಾಡಿದಾಗ ಆರೋಗ್ಯ ಸುಧಾರಣೆಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶನಿವಾರ ನಾರಾವಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾಪೂರ್ವಕ ಜಿನಬಿಂಬ ಪ್ರತಿಷ್ಠಾಮಹೋತ್ಸವ ಸಂದರ್ಭ ಆಯೋಜಿಸಿದ ಧಾರ್ಮಿಕಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾನ, ಧರ್ಮಾದಿ ಸತ್ಕಾರ್ಯಗಳಿಗೆ ಅಂತಸ್ತು, ಸಂಪತ್ತಿನ ಇತಿ ಮಿತಿ ಇರುವುದಿಲ್ಲ. ಶ್ರಾವಕರು, ಶ್ರಾವಕಿಯರು ಹಾಗೂ ಉದಾರ ದಾನಿಗಳು ಶ್ರದ್ಧಾ, ಭಕ್ತಿಯೊಂದಿಗೆ ತನು, ಮನ, ಧನದೊಂದಿಗೆ ನೀಡಿದ ದಾನ ಮತ್ತು ಸಕ್ರಿಯ ಸಹಕಾರದಿಂದ ಬಸದಿಯು ಆಕರ್ಷಕವಾಗಿ ಮೂಡಿ ಬಂದಿದೆ. ಬಸದಿಗೆ ಬಂದಾಗ ಇಲ್ಲಿ ಸ್ವಲ್ಪ ಹೊತ್ತು ಇದ್ದು ಧ್ಯಾನ, ಪ್ರಾರ್ಥನೆ, ಜಪ-ತಪ ಮಾಡುವ ಪ್ರೇರಣೆ ಸಿಗುತ್ತದೆ ಎಂದರು.

ಇಂತಹ ಪವಿತ್ರ ಶ್ರದ್ಧಾ ಕೇಂದ್ರಗಳಿಂದ ಜೈನಧರ್ಮದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ಜೀವನ ನಡೆಸಲು ಸ್ಪೂರ್ತಿ, ಪ್ರೇರಣೆ ಸಿಗುತ್ತದೆ. ಜೈನರ ಪ್ರಭಾವದಿಂದ ಅನ್ಯಧರ್ಮಿಯರು ಕೂಡಾ ಮದ್ಯ, ಮಾಂಸ, ಮಧು ತ್ಯಾಗ, ರಾತ್ರಿಭೋಜನ ತ್ಯಾಗ ಮೊದಲಾದವುಗಳನ್ನು ಪಾಲಿಸಿ ಸಾತ್ವಿಕ ಜೀವನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಡಾ.ಹೆಗ್ಗಡೆ ಹೇಳಿದರು.

ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಆಚಾರ್ಯ ಪರಂಪರೆಯಿಂದ ದೇವರು, ಗುರುಗಳು ಮತ್ತು ಶಾಸ್ತ್ರದ ಮೂಲಕ ಧರ್ಮ ಪ್ರಭಾವನೆಯಾಗುತ್ತಿದೆ. ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬಿಂಬ ಪ್ರತಿಷ್ಠಾಪನೆ ಮಾಡಿದಾಗ ಮಂದಿರದಲ್ಲಿ ಸಾನ್ನಿಧ್ಯವೃದ್ಧಿಯೊಂದಿಗೆ ಶ್ರದ್ಧಾಕೇಂದ್ರವಾಗಿ ಬೆಳೆಯುತ್ತದೆ. ಬೆಳಗುತ್ತದೆ ಎಂದರು.

ಮೂಡುಬಿದಿರೆಯ ವಕೀಲ ಶ್ವೇತಾ ಜೈನ್ ಧಾರ್ಮಿಕ ಉಪನ್ಯಾಸ ನೀಡಿ, ಧರ್ಮದ ಮರ್ಮವನ್ನರಿತು ನಿತ್ಯವೂ ಅನುಷ್ಠಾನಗೊಳಿಸಬೇಕು. ಆತ್ಮ ಬೇರೆ, ದೇಹ ಬೇರೆ ಎಂಬ ಸತ್ಯವನ್ನರಿತು ದೇವರದರ್ಶನ, ಪ್ರಾರ್ಥನೆ, ಧ್ಯಾನ, ಉಪವಾಸ ಮೊದಲಾದ ವ್ರತ, ನಿಯಮಗಳ ಪಾಲನೆಯೊಂದಿಗೆ ಕರ್ಮನಿರ್ಜರೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್ ಮಾತನಾಡಿ, ಬಸದಿ ಜೀರ್ಣೋದ್ಧಾರದಿಂದ ಧರ್ಮಜಾಗೃತಿಯೊಂದಿಗೆ ಧರ್ಮ ಪ್ರಭಾವನೆಯೂ ಆಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ. ಜೈನಧರ್ಮ ಸಾರ್ವಕಾಲಿಕ ಧರ್ಮವಾಗಿದ್ದು, ಬಸದಿಗಳ ಜೀರ್ಣೋದ್ಧಾರದಿಂದ ಧರ್ಮಪ್ರಭಾವನೆಯಾಗುತ್ತದೆ ಎಂದರು.

ಮಾಜಿ ಸಚಿವ ಕೆ. ಅಭುಯಚಂದ್ರ ಜೈನ್, ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ವಸಂತ ಭಟ್ ನಾರಾವಿ ಇದ್ದರು.

ಅರವಿಂದ ಜೈನ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಕರುಣಾಕರ ಜೈನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ