ಕನ್ನಡಪ್ರಭ ವಾರ್ತೆ ಬೈಲಹೊಂಗಲ: ಇಂದು ಮತದಾನ ಹಿನ್ನಲೆಯಲ್ಲಿ ತರಬೇತಿ ಪಡೆದ ಚುನಾವಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಪರಿಕರಗಳೊಂದಿಗೆ ಮಸ್ಟರಿಂಗ್ ಕೇಂದ್ರಗಳಿಂದ ಉತ್ಸಾಹದಿಂದ ಸೋಮವಾರ ತಮ್ಮ, ತಮ್ಮ ಮತಗಟ್ಟೆಗಳಿಗೆ ತೆರಳಿದರು.
ಈ ವೇಳೆ ಚುನಾವಣಾಧಿಕಾರಿ ಎಂ.ಸತೀಶಕುಮಾರ ಮಾತನಾಡಿ, ಚುನಾವಣೆ ತರಬೇತಿ ಕೇಂದ್ರಕ್ಕೆ ಚುನಾವಣೆ ವೀಕ್ಷಕ ಎಂ.ಕೆ.ಅರವಿಂದಕುಮಾರ ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೈಲಹೊಂಗಲ ವಿಧಾನಸಭೆ ಕ್ಷೇತ್ರದಲ್ಲಿ 224 ಮತಗಟ್ಟೆಗಳಿದ್ದು, 173 ಸೂಕ್ಷ್ಮ, 54 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 101 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದೆ. 5 ಸಖಿ ಮತಗಟ್ಟೆ, 1 ವಿಶೇಷಚೇತನರ ಮತಗಟ್ಟೆ ತೆರೆಯಲಾಗಿದೆ. ಚುನಾವಣೆ ಸಿಬ್ಬಂದಿ ಕರೆದೊಯ್ಯಲು 41 ರೂಟ್‌ಗಳಿಗೆ 25 ಬಸ್ ವ್ಯವಸ್ಥೆ ಮಾಡಲಾಗಿದೆ. 16 ಕ್ರೂಸರ್ ಬಳಕೆ ಮಾಡಿಕೊಳ್ಳಲಾಗಿದೆ. ಭದ್ರತೆಗಾಗಿ ಓರ್ವ ಡಿವೈಎಸ್ಪಿ, ಇಬ್ಬರು ಸಿಪಿಐ, ಮೂರು ಪಿಎಸ್‌ಐ ಸೇರಿ 376 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ, ತಾಪಂ ಇಒ ಗಂಗಾಧರ ಕಂದಕೂರ, ಮುಖ್ಯಾಧಿಕಾರಿ ವಿರೇಶ ಹಸಬಿ, ಕ್ಷೇತ್ರಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಮಾಸ್ಟರ್ ಟ್ರೇನರ್ ಬಸವರಾಜ ಭರಮನ್ನವರ, ರಾಮಕೃಷ್ಣ ಮಾದರ, ಸುನೀಲ ಗುಡಬೋಲೆ ಚುನಾವಣೆ ಸಿಬ್ಬಂದಿ ಇದ್ದರು.