ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗುಂಪಾ ರಿಂಗ್ ರಸ್ತೆವರೆಗೆ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಬೀದರ್
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗುಂಪಾ ರಿಂಗ್ ರಸ್ತೆವರೆಗೆ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಭರವಸೆ ನೀಡಿದರು.
ಇಲ್ಲಿಯ ಕುಂಬಾರವಾಡ ಕಮಾನ್ ಸಮೀಪದ ಮಹೇಶ್ ಫಂಕ್ಷನ್ ಹಾಲ್‌ನಲ್ಲಿ ನಡೆದ ರಾಂಪುರೆ ಬ್ಯಾಂಕ್ ಕಾಲೋನಿಯ ಗಾಂಧಿ ಗೆಳೆಯರ ಬಳಗದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಗಾಂಧಿ ಗೆಳೆಯರ ಬಳಗದ ಪಾದಚಾರಿ ಮಾರ್ಗದ ಬೇಡಿಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಬೀದರ್ ಶಾಸಕ ರಹೀಂಖಾನ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಗಾಂಧಿ ಗೆಳೆಯರ ಬಳಗ ಹುಟ್ಟಿಕೊಂಡಿದ್ದು, ರಾಂಪುರೆ ಬ್ಯಾಂಕ್ ಕಾಲೋನಿಯ ಅಭಿವೃದ್ಧಿ ಉದ್ದೇಶದಿಂದ. ಇದೀಗ 19 ವರ್ಷ ಯಶಸ್ವಿಯಾಗಿ ಪೂರೈಸಿದೆ. ಸಂಘದಿಂದ ಕಾಲೋನಿಯಲ್ಲಿ ರಸ್ತೆ, ಚರಂಡಿ, ದಾರಿದೀಪ, ಸಸಿ ನೆಡುವಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ಹಿಂದೆ ಕಾಲೋನಿಯಲ್ಲಿ ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದಿದ್ದಾಗ, ಬಳಗದ ಸದಸ್ಯರೆಲ್ಲರೂ ಸೇರಿ ನಿವೇಶನ ಖರೀದಿಸಿ, ರಸ್ತೆ ನಿರ್ಮಾಣ ಮಾಡಲಾಗಿತ್ತು ಎಂದು ಸ್ಮರಿಸಿದರು.
ಬಳಗದಿಂದ ಕಾಲೋನಿಯ ಉದ್ಯಾನ ನಿರ್ವಹಣೆ ಮಾಡಲು ಹಾಗೂ ಬಳಗದ ಸದಸ್ಯರ ಸಾಧಕ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಪ್ರಭು ಪಾಟೀಲ ಹಾಗೂ ರಾಜಾರಾಮ ಚಿಟ್ಟಾ ಅವರಿಗೆ ಕಾಲೋನಿ ಜನರ ವಿವಿಧ ಬೇಡಿಕೆಗಳ ಕುರಿತ ಮನವಿ ಪತ್ರ ಸಲ್ಲಿಸಲಾಯಿತು.ಬಳಗದ ಸಾಧಕ ಸದಸ್ಯರನ್ನು ಸನ್ಮಾನಿಸಿ, ಸದಸ್ಯರಿಗೆ ಪ್ರವಾಸಿ ಬ್ಯಾಗ್ ವಿತರಿಸಲಾಯಿತು.
ಉದ್ಯಮಿ ಉಮೇಶ ಬಿರಾದಾರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಧನರಾಜ ಹಂಗರಗಿ, ವಿಶ್ವಕರ್ಮ ಬ್ಯಾಂಕ್ವೆಟ್ ಹಾಲ್ ಮಾಲೀಕ ಪಾಂಡುರಂಗ ಪಾಂಚಾಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ್ ಪಾಟೀಲ, ಸಹ ಕಾರ್ಯದರ್ಶಿ ರಾಚಯ್ಯ ಸ್ವಾಮಿ, ಶಿವರಾಜ ಶ್ರೀಮಂಗಲೆ, ಬಳಗದ ರಘುನಾಥರಾವ್ ಮೇತ್ರೆ, ಖಜಾಂಚಿ ಶಿವಶಂಕರ ಸ್ವಾಮಿ, ಬಸವಣಪ್ಪ ಮಠ, ದೇವೇಂದ್ರ ಡಿಗ್ಗಿ, ಗಂಗಾಧರ ತಡಕಲ್ ಮತ್ತಿತರರು ಇದ್ದರು.
--
ಗಾಂಧಿ ಗೆಳೆಯರ ಬಳಗದ ವಾರ್ಷಿಕ ಮಹಾಸಭೆಯನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.