ಅಜೆಕಾರು ಕೊಲೆ ತನಿಖೆ ಹಾದಿ ತಪ್ಪಿಸುವ ಯತ್ನ: ಆರೋಪ

KannadaprabhaNewsNetwork | Published : Nov 5, 2024 12:37 AM

ಸಾರಾಂಶ

ಅಜೆಕಾರು ನಿವಾಸಿ ಬಾಲಕೃಷ್ಣ ಪೂಜಾರಿಯನ್ನು ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆ ಸೇರಿ ಹತ್ಯೆಗೈದು ಬಳಿಕ ಇದು ಸಹಜ ಸಾವು ಎಂದು ನಾಟಕವಾಡಿದ್ದಳು. ಈ ಸಾವಿನ ಕುರಿತು ಮೃತ ಬಾಲಕೃಷ್ಣ ಪೂಜಾರಿಯವರ ತಂದೆ ಸಂಜೀವ ಪೂಜಾರಿ ಹಾಗೂ ಪತ್ನಿ ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ ಸಂಶಯ ವ್ಯಕ್ತಪಡಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳು ಕಾರ್ಕಳ ಪೊಲೀಸರ ಹಿಂದೆ ಸೂಟ್ ಕೇಸ್ ಹಿಡಿದು ತಿರುಗಾಡುತ್ತಾ, ಪ್ರಕರಣದ ಹಾದಿ ತಪ್ಪಿಸಲು ಪ್ರಭಾವ ಬೀರುತ್ತಿದ್ದಾರೆ ಎಂದು ಕೊಲೆಯಾದ ಬಾಲಕೃಷ್ಣ ಅವರ ತಮ್ಮ ಪ್ರಕಾಶ್ ಆರೋಪಿಸಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್, ಈ ಪ್ರಕರಣದ ಎರಡನೇ ಆರೋಪಿ ದಿಲೀಪ್‌ನನ್ನು ರಕ್ಷಣೆ ಮಾಡಲು ಆತನ ತಂದೆ ಮತ್ತು ಇತರರು ಪೊಲೀಸ್‌ ಇಲಾಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಿದ ಪ್ರತಿಮಾಳ ಅಣ್ಣ ಸಂದೀಪ್ ಮತ್ತು ಅವರ ಮನೆಯವರಿಗೂ ಅಪರಿಚಿತರಿಂದ ಕರೆಗಳು ಬರುತ್ತಿದ್ದು, ಪ್ರಕರಣದಲ್ಲಿ ಆಸಕ್ತಿ ತೋರಿಸದಂತೆ ಬೆದರಿಕೆ ಹಾಕುತ್ತಿದ್ದಾರೆ. ರಾಜಿ ಮಾಡಿಕೊಳ್ಳೋಣ, ಮೃತರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇವೆ ಎಂದೆಲ್ಲಾ ಆಮಿಷ ಒಡ್ಡುತ್ತಿದ್ದಾರೆ ಎಂದರು.ಆರೋಪಿ ದಿಲೀಪ್ ಹೆಗ್ಡೆಯ ಕುಟುಂಬದವರು ಹಣದ ಪ್ರಭಾವದಿಂದ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಪೊಲೀಸರು ಸರಿಯಾದ ದಾರಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು, ತನಿಖೆಯ ದಾರಿ ತಪ್ಪಿದ್ದಲ್ಲಿ ಹೋರಾಟ ನಡೆಸುತ್ತೇವೆ. ಈಗಾಗಲೇ ಅನೇಕ ಸಂಘಟನೆಗಳು ಬೆಂಬಲವನ್ನು ಸೂಚಿಸಿವೆ ಎಂದರು.ಕಳೆದ ಮೂರು ತಿಂಗಳಿನಿಂದ ಅಣ್ಣ ಬಾಲಕೃಷ್ಣ ಅವರಿಗೆ ವಿಷ ಪ್ರಾಶನ ಮಾಡಿಸಲಾಗುತ್ತಿದ್ದು ಎಂಬುದು ಬಹಿರಂಗವಾಗಿದೆ. ಆದರೆ ಆತನಿಗೆ ಚಿಕಿತ್ಸೆ ನೀಡಿದ ಮಣಿಪಾಲ, ಮಂಗಳೂರು, ಬೆಂಗಳೂರು ಆಸ್ರತ್ರೆಯ ವೈದ್ಯರಿಗೆ ಈ ಅಂಶ ಯಾಕೆ ಗಮನಕ್ಕೆ ಬಂದಿಲ್ಲ ಎಂಬ ಬಗ್ಗೆ ಅನುಮಾನವಿದೆ ಎಂದವರು ಶಂಕೆ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಆರೋಪಿ ಪ್ರತಿಮಾಳ ಅಣ್ಣ ಸಂದೀಪ್, ಮೃತ ಬಾಲಕೃಷ್ಣರ ಕುಟುಂಬಿಕರಾದ ತಾರಾನಾಥ್ ಕೋಟ್ಯಾನ್, ಸಂಜೀವ ಪೂಜಾರಿ, ಶಶಿರೇಖಾ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯ ಬಳಿಕ ಈ ಕುಟುಂಬವು ಎಸ್ಪಿ ಡಾ. ಅರುಣ್‌ ಕುಮಾರ್ ಅವರನ್ನು ಭೇಟಿಯಾಗಿ, ಸರಿಯಾದ ತನಿಖೆಯನ್ನು ನಡೆಸಿ ತಮಗೆ ನ್ಯಾಯ ಒದಗಿಸುವಂತೆ ಮನವಿಯನ್ನು ಸಲ್ಲಿಸಿತು.

ಆರೋಪಿ ಪ್ರತಿಮಾ ಮತ್ತಾಕೆಯ ಪ್ರಿಯಕರ ದಿಲೀಪ್‌ ಎಂಬವರು ಸೇರಿ ಆಕೆಯ ಗಂಡ ಬಾಲಕೃಷ್ಣ ಅವರಿಗೆ ಸ್ಲೋ ಪಾಯಿಸನ್‌ ನೀಡಿ ಅನಾರೋಗ್ಯಕ್ಕೀಡಾಗುವಂತೆ ಮಾಡಿ, ಹಾಸಿಗೆಯಲ್ಲಿದ್ದ ಅವರ ಮುಖಕ್ಕೆ ತಲೆದಿಂಬು ಒತ್ತಿ ಕೊಲೆ ಮಾಡಿದ್ದರು ಎಂದು ಅವರು ತಿಳಿಸಿದರು.

ನನ್ನ ಆರೋಗ್ಯದಲ್ಲೂ ವ್ಯತ್ಯಯ: ಸಂದೀಪ್‌

ಆರೋಪಿ ಪ್ರತಿಮಾಳ ಸಹೋದರ ಸಂದೀಪ್ ಮಾತನಾಡಿ, ನಾನು ಮತ್ತು ಭಾವ ಅನ್ಯೋನ್ಯವಾಗಿದ್ದೆವು. ತಾವಿಬ್ಬರು ಒಟ್ಟಿಗೆ ಇರುತ್ತಿದ್ದೆವು. ಈಗೀಗ ನನ್ನ ಆರೋಗ್ಯದಲ್ಲೂ ವ್ಯತ್ಯಾಸ ಉಂಟಾಗುತ್ತಿದೆ. ಸ್ನಾಯು ಸೆಳೆತ, ಕುತ್ತಿಗೆ ಭಾಗದಲ್ಲಿ ನೋವು ಆಗಾಗ ಕಾಣಿಸಿಕೊಳ್ಳುತ್ತಿದೆ. ನನಗೂ ಅನುಮಾನವಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವೆ ಎಂದರು.

-------------------------------

ಬಾಲಕೃಷ್ಣ ಪೂಜಾರಿ ಉಸಿರುಗಟ್ಟಿ ಸಾವು: ಮರಣೋತ್ತರ ಪರೀಕ್ಷಾ ವರದಿ

ಕನ್ನಡಪ್ರಭ ವಾರ್ತೆ ಕಾರ್ಕಳ

ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರಿಕ್ಷಾ ವರದಿ ಬಹಿರಂಗವಾಗಿದ್ದು, ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ. ಈ ವರದಿ ಮೂಲಕ ಕೊಲೆ ಪ್ರಕರಣಕ್ಕೆ ಬಲವಾದ ಸಾಕ್ಷ್ಯಲಭಿಸಿದೆ.

ಅಜೆಕಾರು ನಿವಾಸಿ ಬಾಲಕೃಷ್ಣ ಪೂಜಾರಿಯನ್ನು ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆ ಸೇರಿ ಹತ್ಯೆಗೈದು ಬಳಿಕ ಇದು ಸಹಜ ಸಾವು ಎಂದು ನಾಟಕವಾಡಿದ್ದಳು. ಈ ಸಾವಿನ ಕುರಿತು ಮೃತ ಬಾಲಕೃಷ್ಣ ಪೂಜಾರಿಯವರ ತಂದೆ ಸಂಜೀವ ಪೂಜಾರಿ ಹಾಗೂ ಪತ್ನಿ ಪ್ರತಿಮಾಳ ಸಹೋದರ ಸಂದೀಪ್ ಪೂಜಾರಿ ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಶವದ ಮರಣೋತ್ತರ ವರದಿ ಹಾಗೂ ಶವದ ಅಂಗಾಗಗಳ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಿದ್ದರು. ಈ ಪೈಕಿ ಮಣಿಪಾಲ ಆಸ್ಪತ್ರೆಯಿಂದ ಶವದ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈಸೇರಿದ್ದು, ಬಾಲಕೃಷ್ಣ ಪೂಜಾರಿ ಸಾವಿನ ಕುರಿತು ಆತನ ಸಂಬಧಿಕರು ನೀಡಿರುವ ಸಂಶಯಾಸ್ಪದ ದೂರಿಗೆ ಹಾಗೂ ವೈದ್ಯಕೀಯ ವರದಿಗೆ ತಾಳೆಯಾಗುತ್ತಿದೆ.ಬಾಲಕೃಷ್ಣ ಪೂಜಾರಿಯವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಹಾಗೂ ಆ ಸಂದರ್ಭದಲ್ಲಿ ಮುಖದ ಮೇಲೆ ಗಾಯದ ಗುರುತುಗಳು ಮೂಡಿವೆ ಎಂದು ಪೋಸ್ಟ್ ಮಾರ್ಟಮ್ ವರದಿಯಲ್ಲಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ. ಮರಣೋತ್ತರ ವರದಿ ಆಧರಿಸಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Share this article