ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಣಸಂದ್ರ ಗ್ರಾಮದ ಸರ್ವೆ ನಂಬರ್ 20/1ಎ ಹಾಗೂ 20/1ಬಿ ನಲ್ಲಿನ ಜಮೀನನ್ನು ಕೆಲವರು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಲಪಟಾಯಿಸಲು ಯತ್ನಿಸುತ್ತಿದ್ದಾರೆ. ಈಗಾಗಲೇ ಕಳೆದ 40 ವರ್ಷಗಳಿಂದ ಅನುಭವದಲ್ಲಿರುವ ಖಾತೆದಾರರಿಗೆ ದುರುದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಸಂಬಂಧ ತಹಸೀಲ್ದಾರ್ ರವರು ಖುದ್ದು ಸ್ಥಳ ಪರಿಶೀಲಿಸಿ ಸತ್ಯಾಸತ್ಯತೆಗಳನ್ನು ತಿಳಿಯಲು ಸಂಪೂರ್ಣ ಜಾಗವನ್ನು ಅಳತೆ ಮಾಡಿಸಬೇಕು. ಅಲ್ಲದೇ ಸರ್ಕಾರಿ ಜಮೀನನ್ನು ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀಡಿ ಅಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಪಾರ್ಕ್ ನ್ನು ನಿರ್ಮಾಣ ಮಾಡಬೇಕೆಂದು ಸೋಮಶೇಖರ್ ಆಗ್ರಹಿಸಿದರು. ಸರ್ಕಾರಿ ಜಮೀನಿನ ಪಕ್ಕದಲ್ಲೇ ಖಾಸಗಿ ವ್ಯಕ್ತಿಯೋರ್ವರ ಜಮೀನಿದ್ದು ತಮ್ಮ ಜಮೀನನ್ನೂ ಸೇರಿದಂತೆ ಸರ್ಕಾರಿ ಜಮೀನನ್ನೂ ಸಹ ತಮ್ಮದೆಂದೇ ಬಿಂಬಿಸಿಕೊಂಡು ಸಾರ್ವಜನಿಕರು ಓಡಾಡದಂತೆ ತೊಂದರೆ ಕೊಡುತ್ತಿದ್ದಾರೆ. ಕೂಡಲೇ ತಹಸೀಲ್ದಾರ್ ರವರು ಕ್ರಮ ಜರುಗಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕೆಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಬಾಣಸಂದ್ರ ಗ್ರಾಮಸ್ಥರಾದ ಬಸವರಾಜು ಮಾತನಾಡಿ ನಾವು ನಮ್ಮ ತಾತನ ಕಾಲದಿಂದಲೂ ಬಾಣಸಂದ್ರದ ವಾಸಿಗಳಾಗಿದ್ದೇವೆ. ಆದರೆ ಇತ್ತೀಚೆಗೆ ಬಾಣಸಂದ್ರ ಗ್ರಾಮಕ್ಕೆ ವಲಸೆ ಬಂದ ಕೆಲವರು ಸರ್ಕಾರಿ ಜಾಗಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಭೂಮಿ ಕಬಳಿಸಲು ಮುಂದಾಗಿದ್ದಾರೆ. ಅಲ್ಲದೇ ಅಕ್ಕಪಕ್ಕ ಜಮೀನಿನ ಮೂಲ ಮಾಲೀಕರಿಗೆ, ಈಗಾಗಲೇ ಇ ಸ್ವತ್ತು ಹೊಂದಿ ಮನೆ ಕಟ್ಟಿಕೊಂಡಿರುವವರಿಗೂ ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿದರು. ಕೂಡಲೇ ತಹಸೀಲ್ದಾರ್ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಾಣಸಂದ್ರ ಗ್ರಾಮಸ್ಥರಾದ ಆರ್.ಲಕ್ಷ್ಮಣಯ್ಯ, ಅನಂತರಾಮು , ಬಿ.ಆರ್.ಹನುಮಯ್ಯ, ರಾಜಣ್ಣ, ನಾಗರಾಜು, ಸೋಮೇನಹಳ್ಳಿ ಜಗದೀಶ್ ಸೇರಿದಂತೆ ಇತರರು ಇದ್ದರು.