ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬೇಬಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಹಾಗೂ ಪರಿವರ್ತನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಮೊದಲು ಶಿಸ್ತು, ಸಂಸ್ಕಾರವನ್ನು ರೂಢಿಸಿಕೊಂಡು ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಘಟ್ಟ. ಆ ಸಮಯದಲ್ಲಿ ಮೈಮರೆಯಬಾರದು. ನಿಮ್ಮ ಶೈಕ್ಷಣಿಕ ಸಾಧನೆಯ ಹೆಜ್ಜೆ ಗುರುತುಗಳು ಅಲ್ಲಿಂದಲೇ ಮೂಡಿಸುವಂತಾಗಬೇಕು. ಅದಕ್ಕೆ ಇಷ್ಟಪಟ್ಟು ಓದುವುದಕ್ಕೆ ಪ್ರತಿಯೊಬ್ಬರೂ ಮುಂದಾಗುವಂತೆ ಕಿವಿಮಾತು ಹೇಳಿದರು.ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಬಹಳ ಮುಖ್ಯ. ಡಿಸೆಂಬರ್ ತಿಂಗಳು ಎದುರಾಗಿದೆ. ಈಗಿನಿಂದಲೇ ವಿದ್ಯಾರ್ಥಿಗಳೇ ದಿನೇ ವೇಳಾ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಓದಿನ ಕಡೆ ಮುಖ ಮಾಡಬೇಕು. ಈಗಿನಿಂದಲೇ ಕಲಿಕೆಯಲ್ಲಿ ತೊಡಗಿದರೂ ಉತ್ತಮ ಸಾಧನೆ ಮಾಡುವುದಕ್ಕೆ ಅವಕಾಶವಿದೆ. ಎಲ್ಲಾ ಪಠ್ಯ ವಿಷಯಗಳಿಗೂ ಪ್ರಾಮುಖ್ಯತೆ ಕೊಟ್ಟು ಕಲಿಕೆಯಲ್ಲಿ ತೊಡಗಬೇಕು. ಕಷ್ಟದ ವಿಷಯಗಳಿಗೆ ಹೆಚ್ಚು ಸಮಯ, ಆಸಕ್ತಿಯನ್ನು ನೀಡುವುದು ಉತ್ತಮ. ಅರ್ಥವಾಗದೆ ವಿಷಯಗಳಿದ್ದರೆ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಗುಂಪಾಗಿ ಚರ್ಚಿಸುವುದರಿಂದ ಗೊಂದಲ-ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ ಎಂದು ಸಲಹೆ ನೀಡಿದರು.
ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಸಿನಿಮಾ, ಮೊಬೈಲ್ ಸಂಸ್ಕೃತಿಯಿಂದ ವಿದ್ಯಾರ್ಥಿಗಳು ದೂರವಿರಬೇಕು. ಏಕಾಗ್ರತೆ ಬಹಳ ಮುಖ್ಯವಾಗಿರುವುದರಿಂದ ವಿದ್ಯಾರ್ಥಿಗಳು ಯೋಗ, ಧ್ಯಾನದಂತಹ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಮನಸ್ಸು ಕ್ರಿಯಾಶೀಲವಾಗುತ್ತದೆ. ಬುದ್ಧಿ ಚುರುಕಾಗುತ್ತದೆ. ನಿಯಮಿತ ವ್ಯಾಯಾಮದಿಂದ ದೇಹಾರೋಗ್ಯವೂ ಉತ್ತಮವಾಗಿರುತ್ತದೆ ಎಂದು ನುಡಿದರು.ಫಾಸ್ಟ್‌ಫುಡ್, ಜಂಕ್‌ಫುಡ್‌ಗಳು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. ಸೊಪ್ಪು, ತರಕಾರಿ, ಮೀನು, ಮೊಟ್ಟೆಯಂತಹ ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಆರೋಗ್ಯ ಉತ್ತಮವಾಗುತ್ತದೆ. ಕಣ್ತುಂಬಾ ನಿದ್ರೆ ಮಾಡಿ. ನೀವೆಷ್ಟು ಸಮಯ ಓದಿದಿರಿ ಎನ್ನುವುದು ಮುಖ್ಯವಲ್ಲ. ಓದಿದಷ್ಟು ಅವಧಿಯಲ್ಲಿ ಎಷ್ಟು ವಿಷಯಗಳು ಮನನವಾದವು ಎನ್ನುವುದು ಮುಖ್ಯ ಎಂದರು.
ತಂದೆ-ತಾಯಿಯರು, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ. ಮಾನವೀಯ ಗುಣಗಳನ್ನು ರೂಢಿಸಿಕೊಂಡು ಬೆಳವಣಿಗೆ ಸಾಧಿಸಿದಾಗ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಿರಿ ಎಂದರು.ಮುಖ್ಯ ಶಿಕ್ಷಕ ಎಂ.ಎಚ್.ಪುಟ್ಟಸ್ವಾಮಿ ಹಾಗೂ ಶಾಲೆಯ ಇತರೆ ಶಿಕ್ಷಕರು ಭಾಗವಹಿಸಿದ್ದರು.