ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಾತ್ಯತೀತ ಮನೋಭಾವ ಬೆಳೆಸಿಕೊಂಡು ಮಕ್ಕಳು ಸಾಧನೆ ಮಾಡುವ ಮೂಲಕ ಪೋಷಕರ ಕನಸು ನನಸು ಮಾಡಬೇಕು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿಯ ಚಿತ್ರದುರ್ಗ ಜಿಲ್ಲಾ ಘಟಕದಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಪೋಷಕರಿಗೂ ಮಕ್ಕಳು ಉನ್ನತ ಸ್ಥಾನಕ್ಕೆ ಏರಬೇಕೆಂಬುದು ದೊಡ್ಡ ಕನಸಾಗಿರುತ್ತದೆ. ಪೋಷಕರ ಕನಸನ್ನು ನನಸು ಮಾಡುವ ದೊಡ್ಡ ಹೊಣೆಗಾರಿಕೆ ಮಕ್ಕಳ ಮೇಲಿದೆ. ಮಕ್ಕಳು ಸಹ ಉತ್ತಮ ಸಾಧನೆ ಕಡೆ ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದರು.ಪ್ರಸ್ತುತ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಿದ್ದು, ಮೊದಲಿನಂತೆ ಯಾವುದೇ ವ್ಯವಸ್ಥೆಗೆ ಕಾಯುವ ಅವಶ್ಯಕತೆ ಇಲ್ಲ. ಆಧುನೀಕರಣದಲ್ಲಿ ಅಂಗೈಯಲ್ಲಿ ಎಲ್ಲ ಮಾಹಿತಿ ದೊರೆಯುತ್ತಿದ್ದು, ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಮಕ್ಕಳು ಶಿಕ್ಷಣ ಮೈಲುಗಲ್ಲು ಮುಟ್ಟುಬೇಕು ಎಂದರು.
ರಾಜಕಾರಣದಲ್ಲಿ ಪ್ರಚಾರ ಅಗತ್ಯ. ಆದರೆ ಪ್ರಚಾರ ಬಯಸದೇ ಕೆಲಸ ಮಾಡುವ ಒಬ್ಬ ರಾಜಕಾರಣಿ ದೇಶದಲ್ಲಿ ಇದ್ದರೆ ಅದು ನಮ್ಮ ಸತೀಶ್ ಜಾರಕಿಹೊಳಿ ಎಂದರೆ ತಪ್ಪಾಗಲಾರದು. ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದಲ್ಲಿ ತಮ್ಮ ಹೆಸರನ್ನು ಸಹ ಬಳಕೆ ಮಾಡದೇ ತೆರೆಯ ಹಿಂದೆ ಸಮಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಪ್ರತಿಭೆ ಮತ್ತು ಜಾತಿಗೆ ಯಾವುದೇ ಸಂಬಂಧವಿಲ್ಲ. ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ನಾಳಿನ ಸಮಾಜಕ್ಕೆ ಆಸ್ತಿ ಎಂದರೆ ಅದು ಪ್ರತಿಭಾವಂತ ಮಕ್ಕಳು ಎಂದರು.
ಸಾಹಿತಿ ಪ್ರೊ. ಲೋಕೇಶ್ ಅಗಸನಕಟ್ಟೆ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಮೂಲಕ ಎಲ್ಲರೊಳಗೆ ಬಂಧುತ್ವ ಸಾಧಿಸುವ ಮೂಲಕ ಕಲ್ಯಾಣ ಕರ್ನಾಟಕ ಮಾಡಬಹುದಾಗಿದೆ. ರಾಮರಾಜ್ಯ ಮಾಡಲು ಸಾಧ್ಯವಾಗದಿದ್ದರೂ ಕಲ್ಯಾಣ ಭಾರತ ಸ್ಥಾಪಿಸಬೇಕಾಗಿದೆ. ನಮಗೆಲ್ಲ ಪ್ರಧಾನವಾಗಿ ಸಮಾನತೆ ಮತ್ತು ಸಹೋದರತ್ವ ಅತ್ಯಗತ್ಯವಾಗಿ ಬೇಕಾಗಿದೆ ಎಂದರು.ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದಿಂದ ಮಕ್ಕಳಿಗೆ ಪ್ರೇರಪಣೆ ನೀಡಿದಂತೆ ಆಗುತ್ತದೆ ಎಂದರು.
ಕರ್ನಾಟಕ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಯೋಗೇಶ್ ಬಾಬು ಮಾತನಾಡಿದರು. ಮುಖಂಡರಾದ ಬಿ.ಟಿ. ಜಗದೀಶ್, ಎಚ್.ಅಂಜಿನಪ್ಪ, ಬಿ.ಮಂಜುನಾಥ್, ಸಯ್ಯದ್ ಖುದ್ದೂಸ್, ನಾಗರಾಜ್ ಕ್ಯಾದಿಗುಂಟೆ, ಚಳ್ಳಕೆರೆ ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುಬಾಬು, ಪ್ರಕಾಶ್ ರಾಮಾ ನಾಯ್ಕ, ಕಣುಮೇಶ್, ಮಾ.ಬಂ. ವೇದಿಕೆಯ ಮಹಿಳಾ ಸಂಚಾಲಕಿ ಬೈಲಮ್ಮ, ಬಸವರಾಜ್, ಹನುಂಮತಪ್ಪ ತಮಟಕಲ್, ಪ್ರಭಾವತಿ, ಅಂಬಿಕಾ, ಮಾರುತೇಶ್, ಮಾರುತಿ, ತಿಪ್ಪೇಸ್ವಾಮಿ ಇದ್ದರು.