ಕನ್ನಡಪ್ರಭ ವಾರ್ತೆ ರಾಮನಗರ ಕೆಂಪೇಗೌಡ ಉತ್ಸವದ ಅಂಗವಾಗಿ ಬಿಡದಿ ಹೋಬಳಿ ಮಟ್ಟದ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆದಿದ್ದು, ಆಯ್ಕೆಯಾಗಿರುವ ಮೊದಲ ನಾಲ್ಕು ತಂಡಗಳನ್ನು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿನಿಧಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು ಹೇಳಿದರು.
ಎಲ್ಲ ವಿಭಾಗಗಳಲ್ಲಿ ತಲಾ ಎರಡು ತಂಡಗಳನ್ನು ಆಯ್ಕೆ ಮಾಡಲಾಗುವುದು. ಕ್ರಿಕೆಟ್ ಲೀಗ್‌ನಲ್ಲಿ ಉತ್ತಮ ಬೌಲಿಂಗ್, ಬ್ಯಾಟಿಂಗ್, ಕ್ಷೇತ್ರ ರಕ್ಷಣೆ ಮಾಡಿದ ಉತ್ತಮ ಆಟಗಾರರನ್ನು ಗುರುತಿಸಿ, ಅವರನ್ನು ವಿಧಾನಸಭಾ ಮಟ್ಟದ ತಂಡಗಳಿಗೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಈಗಾಗಲೇ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೈರಮಂಗಲ ಯಂಗ್ ಸ್ಟಾರ್ ತಂಡ ಪ್ರಥಮ, ಕಾಕರಾಮನಹಳ್ಳಿ ಹೇಮಂತ್ ಬಾಯ್ಸ್ ದ್ವಿತೀಯ, ಹೌಸಿಂಗ್ ಬೋರ್ಡ್ ತಂಡ ತೃತೀಯ ಸ್ಥಾನ ಪಡೆದಿವೆ. ಕಬಡ್ಡಿಯಲ್ಲಿ ಬಿಡದಿ ಕ್ಲಬ್ ಪ್ರಥಮ, ಚೌಕಳ್ಳಿ ತಂಡ ದ್ವಿತೀಯ, ಬಾನಂದೂರು ತಂಡ ತೃತೀಯ ಸ್ಥಾನ ಪಡೆದಿವೆ ಎಂದು ತಿಳಿಸಿದರು.ಡಿ.7 ರಂದು ವಾಯ್ಸ್ ಆಫ್ ಬಿಡದಿ, ದಂಪತಿಗಳ ಪ್ಯಾಷನ್ ಷೋ ಕಾರ್ಯಕ್ರಮಗಳು ನಡೆಯಲಿವೆ.ಕೆಂಪೇಗೌಡ ಉತ್ಸವದಿಂದ ಕನಕೋತ್ಸವದವರೆಗಿನ ಸಾಂಸ್ಕೃತಿಕ ಮತ್ತು ಕ್ರೀಡಾ ಪಂದ್ಯಾವಳಿಗಳು ಹಲವು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಗಾಣಕಲ್ ನಟರಾಜ್ ತಿಳಿಸಿದರು.
ಈ ವೇಳೆ ಕ್ರಿಕೆಟ್ ಪಂದ್ಯಾವಳಿಯ ಉಸ್ತುವಾರಿಗಳಾದ ಜೀವನ್ ಬಾಬು, ಪೃಥ್ವಿ, ಮನೋಹರ್, ವಾಲಿಬಾಲ್ ವಿಭಾಗದ ಸಂಚಾಲಕರಾದ ಜನಾರ್ಧನ್, ನವೀನ್, ವಿನೋದ್, ಮುಖಂಡರಾದ ಹೇಮಂತ್‌ಕುಮಾರ್, ಅಭಿಷೇಕ್ ಮತ್ತಿತರರು ಇದ್ದರು. ಕ್ರಿಕೆಟ್ ಪಂದ್ಯಾವಳಿ ವೇಳೆ ಆಯೋಜಿಸಿದ್ದ ಚಂಡೆಮದ್ದಳೆ ಜನಪದ ಕಲೆ ಆಕರ್ಷಣೀಯವಾಗಿತ್ತು.