ಕಂದಕೂರಿಗೆ ಕಾಲೇಜು ಮಂಜೂರಿಗೆ ಪಯತ್ನ: ಶಾಸಕರ ಭರವಸೆ

KannadaprabhaNewsNetwork | Published : Jul 30, 2024 12:38 AM

ಸಾರಾಂಶ

ಕಂದಕೂರ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡುವುದು ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಕನಸಾಗಿತ್ತು. ಈ ಭಾಗದ ವಿದ್ಯಾರ್ಥಿಗಳ ಬೇಡಿಕೆಯೂ ಇದೇ ಆಗಿದೆ. ಹಾಗಾಗಿ ಒಂದು ವರ್ಷದಲ್ಲಿ ಕಂದಕೂರಿಗೆ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಕಂದಕೂರ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡುವುದು ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಕನಸಾಗಿತ್ತು. ಈ ಭಾಗದ ವಿದ್ಯಾರ್ಥಿಗಳ ಬೇಡಿಕೆಯೂ ಇದೇ ಆಗಿದೆ. ಹಾಗಾಗಿ ಒಂದು ವರ್ಷದಲ್ಲಿ ಕಂದಕೂರಿಗೆ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಭರವಸೆ ನೀಡಿದರು.

ತಾಲೂಕಿನ ಚಿಂತನಹಳ್ಳಿ ತಾಂಡಾದಲ್ಲಿ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಮೈಕ್ರೋ (ನಾನ್ ಸೋಶಿಯಲ್) ಅನುದಾನದಲ್ಲಿ 350 ಲಕ್ಷದ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಈ ರಸ್ತೆ ಕೇವಲ ಚಿಂತನಹಳ್ಳಿ ತಾಂಡಾ ಮಾತ್ರವಲ್ಲದೇ ಸಾಕಷ್ಟು ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಧಾರ್ಮಿಕ ಸ್ಥಳವಾದ ಗವಿಸಿದ್ದೇಶ್ವರಕ್ಕೆ ತೆರಳುವ ಮಾರ್ಗವಾಗಿರುವುದರಿಂದ ಇದು ಅತ್ಯವಶ್ಯಕವಾಗಿದೆ. ತಮ್ಮ ಸ್ವಗ್ರಾಮದ ಸುತ್ತಲಿನ ಗ್ರಾಮಸ್ಥರು ನನ್ನ ಸೋಲು-ಗೆಲುವಿನಲ್ಲಿ ಜತೆಗಿದ್ದು ಸೇವೆಗೆ ಅವಕಾಶ ನೀಡಿದ್ದೀರಿ. ಇಷ್ಟು ವರ್ಷ ನಮ್ಮನ್ನು ಆಳಿದವರು ನಮ್ಮ ಭಾಗದ ಅಭಿವೃದ್ಧಿ ಮಾಡಿಲ್ಲ. ನಾವು ಸ್ಥಳೀಯರಾಗಿರುವುದರಿಂದದಿ ಈ ಭಾಗದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದರು.

ತಾಂಡಾದಲ್ಲಿ ಸೇವಾಲಾಲ್ ದೇವಸ್ಥಾನ ನಿರ್ಮಾಣಕ್ಕೆ ಬೇಡಿಕೆ ಇದೆ. ಶಾಸಕರ ಅನುದಾನದಲ್ಲಿ ₹18 ಲಕ್ಷ ಮತ್ತು ಮುಜರಾಯಿ ಇಲಾಖೆಯಿಂದ ₹8 ಲಕ್ಷ ಸೇರಿ ಒಟ್ಟು ₹23 ಲಕ್ಷ ಮೀಸಲಿದೆ. ಹೆಚ್ಚಿನ ಅನುದಾನ ತನ್ನ ಅವಧಿಯಲ್ಲಿ ನೀಡಿ ಭವ್ಯ ಮಂದಿರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು. ಗವಿ ಸಿದ್ಧಲಿಂಗೇಶ್ವರಕ್ಕೆ ತೆರಳುವ ಮುಖ್ಯ ರಸ್ತೆಯ ಅಭಿವೃದ್ಧಿಗೆ ₹1 ಕೋಟಿ ಮತ್ತು ಯಂಪಾಡ ರಸ್ತೆ ₹2 ಕೋಟಿ ಮೀಸಲಿಡಲಾಗುವುದು ಎಂದರು.

ಲೋಕೋಪಯೋಗಿ ಸಹಾಯಕ ನಿರ್ದೇಶಕ ಶ್ರೀಧರ್, ಉಪಾಧ್ಯಾಯ ಡಾ. ಚಿನ್ನ ಆಶಪ್ಪ ಮಾತನಾಡಿದರು. ಶಾಸಕ ಕಂದಕೂರು ಅವರನ್ನು ಬಂಜಾರ ಸಮುದಾಯದವರು ಸಾಂಪ್ರದಾಯಿಕ ಭವ್ಯ ಸ್ವಾಗತ ಕೋರಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಂಕ್ರಮ್ಮ ಮ್ಯಾಕಲ್, ತಹಸೀಲ್ದಾರ್ ಕೆ. ನೀಲಪ್ರಭಾ, ತಾಲೂಕು ಪಂಚಾಯ್ತಿ ಅಧಿಕಾರಿ ಸಂತೋಷ್, ಬಸವರಾಜ ಐರೆಡ್ಡಿ, ಡಾ. ದೀಪಿಕಾ, ಸಿಡಿಪಿಓ ಶರಣಬಸವ, ಪಿಡಿಓ ಮೊಹ್ಮದ್ ಅಲಿ ಪ್ರಮುಖರಾದ ಜಿ.ತಮ್ಮಣ್ಣ, ಕೃಷ್ಣಾರೆಡ್ಡಿ ಪೊಲೀಸ್ ಪಾಟೀಲ್, ಜಗನ್ನಾಥ್ ನಾಯಕ, ಮಲ್ಲಿಕಾರ್ಜುನ ತಾತಳಗೇರಾ, ಬಸನಗೌಡ ಮಗ್ದಂಪೂರ, ಈಶ್ವರ ರಾಠೋಡ, ವಾಗು ರಾಠೋಡ, ಸುಭಾಶ್ಚಂದ್ರ ಕಟಕಟಿ ಸೇರಿದಂತೆ ಇತರರಿದ್ದರು.29ವೈಡಿಆರ್18

ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ತಾಂಡದಲ್ಲಿ 350 ಲಕ್ಷ ರು.ಗಳ ವೆಚ್ಚದ ಬಾಕ್ಸ್ ಕಲ್ವರ್ಟ್ ನಿರ್ಮಾಣ ಅಡಿಗಲ್ಲು ಸಮಾರಂಭದಲ್ಲಿ ಶಾಸಕ ಶರಣಗೌಡ ಕಂದಕೂರು ಮಾತನಾಡಿದರು.

Share this article