ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜ ಹಾರಿಸುವ ಯತ್ನ, 13 ಮಂದಿ ಬಂಧನ

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ಕಲಬುರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಆಸಕ್ತಿ ತೋರದೆ ಅಲಕ್ಷಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಮುಖಂಡರು ರಾಜ್ಯೋತ್ಸವ ದಿನವಾದ ನ.1 ರಂದು ಬೆಳಗ್ಗೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯದ ಧ್ವಜ ಹಾರಿಸುವ ಪ್ರಯತ್ನ ಮಾಡಿ ಬಂಧನಕ್ಕೆ ಒಳಗಾಗಿದ್ದಾರೆ.
ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಆಸಕ್ತಿ ತೋರದೆ ಅಲಕ್ಷಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಮುಖಂಡರು ರಾಜ್ಯೋತ್ಸವ ದಿನವಾದ ನ.1 ರಂದು ಬೆಳಗ್ಗೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯದ ಧ್ವಜ ಹಾರಿಸುವ ಪ್ರಯತ್ನ ಮಾಡಿ ಬಂಧನಕ್ಕೆ ಒಳಗಾಗಿದ್ದಾರೆ. ಇಲ್ಲಿನ ಪಟೇಲ್‌ ವೃತ್ತದಲ್ಲಿ ಧ್ವಜಾರೋಹಣಕ್ಕೆ ಮುಂದಾಗುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶ ಮಾಡಿ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಬರುತ್ತಿದ್ದ ಹೋರಾಟ ಸಮಿತಿಯ ಮುಖಂಡರಾದ ಮಹಾದೇವಪ್ಪಗೌಡ ಪಾಟೀಲ್‌, ವಕೀಲರಾದ ವಿನೋದ ಜನೇವರಿ ಸೇರಿದಂತೆ 11 ಮಂದಿಯನ್ನು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ಹೋರಾಟಗಾರರ ಬಳಿ ಇದ್ದಂತಹ ಕೆಂಪು ಬಣ್ಣದ ಧ್ವಜವನ್ನೂ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಮಾತನಾಡಿದ ಹೋರಾಟಗಾರರು, ಕಲ್ಯಾಣ ನಾಡಿನ ಪ್ರತಿ ಸರಕಾರದ ಅಲಕ್ಷತನದ ಧೋರಣೆ ಖಂಡಿಸುವ ಘೋಷಣೆಗಳನ್ನು ಹೋರಾಟಗಾರರು ಕೂಗಿದರು. ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ನಿರ್ಲಕ್ಷ್ಯ ಹಾಗೂ ಕಲಂ 371 ಜೆ ಸಮರ್ಪಕ ಜಾರಿಗೊಳಿಸದಿರುವುದನ್ನು ಖಂಡಿಸುತ್ತೇವೆ ಎಂದರು. ಕಲಬುರಗಿಯನ್ನು ಉಪ ರಾಜಧಾನಿ ಎಂದು ಘೋಷಿಸಬೇಕು, ಇಲ್ಲದೆ ಹೋದಲ್ಲಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಚುರುಕುಗೊಳಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಹೋರಾಟಗಾರ ಎಂ.ಎಸ್‌. ಪಾಟೀಲ್‌ ಹೇಳಿದ್ದಾರೆ. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಬದ್ಧವಾಗಿದ್ದರೆ ಕೂಡಲೇ ಕಲಬುರಗಿಯನ್ನು ರಾಜ್ಯದ ಎರಡನೆ ರಾಜಧಾನಿ ಎಂದು ಘೋಷಿಸಬೇಕು. ಇಲ್ಲಿಯ ಜನರು ತಮ್ಮ ಕೆಲಸಕ್ಕಾಗಿ 600 ಕಿ.ಮೀ. ದೂರದ ರಾಜಧಾನಿ ಬೆಂಗಳೂರಿಗೆ ಹೋಗಿ ಬರುವುದು ದುಬಾರಿ ಜೊತೆಗೆ ಸಮಯವು ವ್ಯರ್ಥವಾಗುತ್ತದೆ. ಹೀಗಾಗಿ ಕಲಬುರಗಿ ಉಪರಾಜಧಾನಿ ಆದರೆ ಎಲ್ಲಾ ಉಪಕಚೇರಿ ಇಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ ಎಂದರು. ಈ ಹಿಂದೆ ಸರ್ಕಾರ 371 (ಜೆ) ಸಮರ್ಪಕ ಅನುಷ್ಠಾನಕ್ಕೆ ವಿಶೇಷ ಅಭಿವೃದ್ಧಿ ಕೋಶ ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಇನ್ನೂ ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ರೈಲ್ವೆ ಡಿವಿಷನ್‌, ಏಮ್ಸ್‌, ಟೆಕ್ಸ್‌ಟೈಲ್‌ ಪಾರ್ಕ್, ಆಹಾರ ಪ್ರಯೋಗಾಲಯ ಹಾಗೂ ಇಂಧನ ಪ್ರಾದೇಶಿಕ ಕಚೇರಿ ಇಲ್ಲಿಂದ ಕೈಬಿಟ್ಟು ಹೋಗಿವೆ. ಹೀಗಾಗಿ ಪ್ರಗತಿ ಇಲ್ಲಿ ಮರೀಚಿಕೆ ಎಂದು ಹೋರಾಟಗಾರರು ದೂರಿದ್ದಾರೆ.

Share this article