ಕನ್ನಡಪ್ರಭ ವಾರ್ತೆ ವಿಜಯಪುರ
ಖಾಸಗಿ ಟ್ರಸ್ಟ್‌ಗೆ ಸಂಬಂಧಿಸಿದ ವಿಜಯಪುರದ ಐವತ್ತಕ್ಕೂ ಹೆಚ್ಚು ದೇವಾಲಯಗಳ ಆಸ್ತಿಯ ದಾಖಲೆಯಲ್ಲಿ ಮುಜರಾಯಿ ಎಂದು ನಮೂದಿಸಲು ಸರ್ಕಾರ ಮುಂದಾಗಿದೆ. ಕೂಡಲೇ ಈ ನಿರ್ಣಯವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮಾಜಿ ಸಚಿವ ಅಪ್ಫಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು.ಈ ವೇಳೆ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜಯಪುರದ ವಿವಿಧ ಖಾಸಗಿ ಟ್ರಸ್ಟ್, ಸಮಿತಿಗಳಿಗೆ ಸೇರಿದ ದೇವಾಲಯವನ್ನು ಮುಜರಾಯಿ ಇಲಾಖೆಯೂ ತನ್ನ ಅಧೀನಕ್ಕೆ ಪಡೆದುಕೊಳ್ಳುತ್ತಿರುವುದು ನಮ್ಮ ನಮನಕ್ಕೆ ಬಂದಿದೆ. ದೇವಾಲಯಕ್ಕೆ ಸೇರಿದ ಆಸ್ತಿಗಳನ್ನು ಮುಜರಾಯಿ ಇಲಾಖೆ ಎಂದು ಉತಾರಗಳಲ್ಲಿ (ಪಹಣಿಗಳಲ್ಲಿ) ನಮೂದಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ದೇವಾಲಯಗಳಿಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಹಾನಗರ ಪಾಲಿಕೆ ಆಯುಕ್ತರಿಗೆ ಈ ಖಾಸಗಿ ದೇವಾಲಯಗಳ ಆಸ್ತಿಗಳಲ್ಲಿ ಹಿಂದು ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರ್ಕಾರ ಎಂದು ನಮೂದಿಸಲು ತಿಳಿಸಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ದೇವಾಲಯಗಳು ಟ್ರಸ್ಟ್ ಅಡಿಯಲ್ಲಿಯೇ ನಿರ್ವಹಣೆಯಾಗುತ್ತಿದ್ದು, ಖಾಸಗಿ ದೇವಾಲಯಗಳು ಎಂದೇ ಪ್ರಸಿದ್ಧಿ ಪಡೆದಿವೆ. ಮೇಲಾಗಿ, ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ನಡೆಯುತ್ತಿವೆ ಎಂಬ ವಾಸ್ತವ ಸಂಗತಿ ಗೊತ್ತಿದ್ದರೂ ವೈಯಕ್ತಿಕ ಹಿತಾಸಕ್ತಿಯಿಂದ ದೇವಾಲಯಗಳ ಖಾಸಗಿ ಆಸ್ತಿಗಳನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯಡಿ ತಂದು ದೇವಾಲಯಗಳ ಮಾಲೀಕರಿಗೆ ತೊಂದರೆ ನೀಡಿ ಅವರ ಆಸ್ತಿಯನ್ನು ಕಬಳಿಸುವ ಷಡ್ಯಂತ್ರ ನಡೆದಿದೆ ಎಂದು ಆರೋಪ ಮಾಡಿದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮ-1997ರಡಿಯಲ್ಲಿ ಯಾವುದೇ ಖಾಸಗಿ ದೇವಾಲಯಗಳು ಹಾಗೂ ಟ್ರಸ್ಟ್‌ಗಳ ಅಡಿಯಲ್ಲಿ ಪಡೆಯಬೇಕಾದಲ್ಲಿ ಅದಕ್ಕೆ ಯಾವುದಾದರೂ ಸರ್ಕಾರದಿಂದ ಅನುದಾನ ಪಡೆಯುತ್ತಿರಬೇಕು. ಜತೆಗೆ ಸರ್ಕಾರದಿಂದ ಅದರ ದಿನಚರಿಗೆ ಸಹಾಯವಾಗುತ್ತಿರಬೇಕು. ಆದರೆ, ವಿಜಯಪುರದಲ್ಲಿ ಉದ್ದೇಶಿತ ದೇವಾಲಯಗಳು ಈ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ನ್ಯಾಯಾಲಯ ಸಹ ಸ್ಪಷ್ಟನೆಯನ್ನು ನೀಡಿದೆ. ಖಾಸಗಿ ಟ್ರಸ್ಟ್‌ನ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಾಗಿದ್ದು ಸರ್ಕಾರ ಕೂಡಲೇ ಈ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲವಾದರೆ ಇದರ ವಿರುದ್ಧ ಮುಂದೆ ನಮ್ಮ ಹೋರಾಟವನ್ನು ಚುರುಕುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ರಾಜು ಬಿರಾದಾರ, ಸಂದೀಪ ಪಾಟೀಲ, ಜಗದೀಶ ಮುಚ್ಚಂಡಿ, ಶ್ರೀಕಾಂತ ಶಿಂಧೆ, ಸತೀಶ ಪಾಟೀಲ, ಗೋಪಾಲ ಘಟಕಾಂಬಳೆ ಸೇರಿದಂತೆ ಇನ್ನು ಮುಂತಾದವರು ಪಾಲ್ಗೊಂಡಿದ್ದರು.
--------------ಕೋಟ್...
ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ನಡೆಯುತ್ತಿವೆ ಎಂಬ ವಾಸ್ತವ ಸಂಗತಿ ಗೊತ್ತಿದ್ದರೂ ಕಾಂಗ್ರೆಸ್ ಸರ್ಕಾರದ ವೈಯಕ್ತಿಕ ಹಿತಾಸಕ್ತಿಯಿಂದ ದೇವಾಲಯಗಳ ಖಾಸಗಿ ಆಸ್ತಿಗಳನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯಡಿ ತಂದು ದೇವಾಲಯಗಳ ಮಾಲೀಕರಿಗೆ ತೊಂದರೆ ನೀಡಿ ಅವರ ಆಸ್ತಿಯನ್ನು ಕಬಳಿಸುವ ಷಡ್ಯಂತ್ರ ನಡೆದಿದೆ.- ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಮಾಜಿ ಸಚಿವ