ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೇರಿದ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತದ ಮುಖಾಂತರ ರಾಜ್ಯಪಾಲಕರು ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಧರಣಿ ಬಳಿಕ ಸಮೀಪದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಡಿಸಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದು ಬಂಧಿಸಿ, ವಾಹನದಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ಡಿಸಿ ಕಚೇರಿ ಮುತ್ತಿಗೆ ಯತ್ನದ ಸಮಯದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡರು, ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಉಪವರ್ಗೀಕರಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದು, ಸಂವಿಧಾನ 341ರ ಪರಿಚ್ಚೇದದ ತಿದ್ದುಪಡಿಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ಆ.1ರಂದೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ವಿಳಂಬ ಧೋರಣೆಗೆ ಆಸ್ಪದ ನೀಡದೇ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜನಗಣತಿ ವರದಿ ವಿಚಾರವನ್ನು ಮುನ್ನೆಲಗೆ ತಂದು ಎಸ್ಸಿ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳದೇ, ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯ ಒಳ ಹುನ್ನಾರ ಮುಂದುವರೆಸಿ ದ್ದೇ ಆದರೆ ಬರುವ ದಿನಗಳಲ್ಲಿ ತೀವ್ರ ಥರದ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.