ಕನ್ನಡಪ್ರಭ ವಾರ್ತೆ ಉಡುಪಿ
ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಒತ್ತಾಯಿಸಿ ಜುಲೈ 22ರಂದು ಕರಾವಳಿ ಜಿಲ್ಲೆಗಳ ಸಂಸದರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಿದ್ದು, ಹೊಸ ರೈಲು ಆರಂಭ, ವಂದೇ ಭಾರತ್ ರೈಲು ಗೋವಾದಿಂದ ಮುಂಬೈ ತನಕ ವಿಸ್ತರಣೆಗೂ ಒತ್ತಾಯಿಸಲಾಗುವುದು. ಜು.17ಕ್ಕೆ ಮಂಗಳೂರಿಗೆ ಬರುವ ರೈಲ್ವೆ ಸಹಾಯಕ ಸಚಿವ ವಿ. ಸೋಮಣ್ಣ ಅವರೊಂದಿಗೂ ಚರ್ಚಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆಯ ನಿರ್ಮಾಣಕ್ಕೆ ಸಿದ್ಧತೆಗಳನ್ನು ಮಾಡಲಾಗಿದೆ. ಪೂರಕವಾಗಿ ಮೆಸ್ಕಾಂ ಲೈನ್ ಪೂರ್ಣ ಸ್ಥಳಾಂತರವಾಗಿದೆ. ಮಳೆ ಬಿಟ್ಟರೆ ತಕ್ಷಣ ಕೆಲಸ ಆರಂಭವಾಗಲಿದೆ. ಅಂಬಲಪಾಡಿಯಲ್ಲಿ ಅಂಡರ್/ ಓವರ್ ಪಾಸ್ ನಿರ್ಮಾಣಕ್ಕೆ ಟೆಂಡರ್ ಆಗಿದ್ದು ವಿನ್ಯಾಸ ಬದಲಾಗಬೇಕಿದೆ. ಕಟಪಾಡಿಯಲ್ಲಿ ಅಂಡರ್ ಪಾಸ್ ಟೆಂಡರ್ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಮಾಧ್ಯಮ ವಕ್ತಾರ ಶ್ರೀನಿಧಿ ಹೆಗ್ಡೆ, ವಿಜಯ ಕುಮಾರ್ ಉದ್ಯಾವರ, ರೇಶ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಗೀತಾಂಜಲಿ ಸುವರ್ಣ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.---------------
ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಹೊರತು ಬೇರೆ ದಾರಿ ಇಲ್ಲ: ಕೋಟಸ್ವತಃ ಮುಖ್ಯಮಂತ್ರಿ ಅವರ ತವರಿನಲ್ಲಿ ನಡೆದ ಮುಡಾ ಹಗರಣ ರಾಜ್ಯವನ್ನೂ ಮೀರಿ ದೇಶದಲ್ಲಿ ಚರ್ಚೆಯಾಗುತ್ತಿದೆ. ಪಾರದರ್ಶಕ, ಪ್ರಾಮಾಣಿಕ ಆಡಳಿತದ ಹೆಸರಲ್ಲಿ ಸ್ವಜನ ಪಕ್ಷಪಾತ, ಹಗರಣದಲ್ಲಿ ತೊಡಗಿದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವಿರುದ್ಧ ಸಂವಿಧಾನ ಬದಲಾವಣೆಯ ಆರೋಪ ಮಾಡಿದ ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡದ ಅಭ್ಯುದಯಕ್ಕೆ ಮೀಸಲಿಟ್ಟ 2023ರಲ್ಲಿ 11,000 ಕೋಟಿ ರು. ಹಾಗೂ 2024 ರಲ್ಲಿ 14,000 ಕೋಟಿ ರು. ಅನುದಾನವನ್ನು ಗ್ಯಾರಂಟಿಗಳಿಗೆ ಬಳಸೋದು ದಲಿತರು, ಹಿಂದುಳಿದ ವರ್ಗಕ್ಕೆ ಮಾಡಿದ ಅನ್ಯಾಯ ಎಂದು ಕಿಡಿ ಕಾರಿದರು.ಕೂಡಲೇ ಖಜಾನೆಗೆ ಈ ಹಣವನ್ನು ಮರು ವರ್ಗಾಯಿಸಬೇಕು. ವಾಲ್ಮೀಕಿ ನಿಗಮದ ಅನುದಾನದ ದುರ್ಬಳಕೆಯಾಗಿದ್ದು ಪ್ರತಿಪಕ್ಷೀಯರ ವಿರುದ್ಧ ಅಧಿಕಾರದ ದರ್ಪ ತೋರಿಸಲಾಗುತ್ತಿದೆ. ಕಾಂಗ್ರೆಸಿಗರು ಮಾಡಿದ ತಪ್ಪಿಗೆ ಬಿಜೆಪಿಯವರನ್ನು ಬಂಧಿಸಿದ್ದು ತುರ್ತುಪರಿಸ್ಥಿತಿಯನ್ನು ನೆನಪಿಸುತ್ತಿದೆ ಎಂದರು.
ಬಿಜೆಪಿ ಆಡಳಿತದಲ್ಲಿ ಶೇ.40 ಕಮಿಷನ್, ಪೇ ಸಿಎಂ ಆರೋಪ ಮಾಡಿದ್ದ ನೀವು ಈಗ ಮಾಡುತ್ತಿರುವುದೇನು ಎಂದು ಪ್ರಶ್ನಿಸಿದ ಕೋಟ, 2023ರ ಚುನಾವಣಾ ಅಫಿದವಿತ್ ಪ್ರಕಾರ ಎಂಟು ಕೋಟಿ ರು. ಮೌಲ್ಯದ ಸೈಟಿಗೆ 60 ಕೋಟಿ ರು. ಕೇಳೋದು ಯಾವ ನ್ಯಾಯ? ಅವರ ಮೌನ ಆಪಾದನೆ ಒಪ್ಪಿದಂತಾಗಿದ್ದು ರಾಜೀನಾಮೆ ಹೊರತು ಬೇರೆ ದಾರಿಯಿಲ್ಲ ಎಂದರು.