ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದ ಎಂ.ಕೆ.ಬೊಮ್ಮೇಗೌಡರ ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ, ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಪತ್ನಿ ಧನಲಕ್ಷ್ಮಿ ಜೊತೆ ಸೇರಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲೇ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾರಂಭವಾಗಲು ಅಂದು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿ.ಎಂ.ಕೆ.ಬೊಮ್ಮೇಗೌಡರು ಕಾರಣ ಎಂದರು.ಸ್ನೇಹ ಸಮ್ಮಿಲನದ ಹೆಸರಿನಲ್ಲಿ ಈ ಸಂಸ್ಥೆ ಎಲ್ಲಾ ಹಳೆಯ ವಿದ್ಯಾರ್ಥಿಗಳೂ ಒಗ್ಗೂಡಿ ಕಾಲೇಜಿನ ಅಭಿವೃದ್ಧಿಗೆ ಮುಂದೆ ಬಂದಿರುವುದು ಸ್ವಾಗತಾರ್ಹ. ನಾನು ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ. 1979ರಲ್ಲಿ ನಾನು ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರಿ ಡಿಪ್ಲೋಮಾ ಶಿಕ್ಷಣ ಪೂರೈಸಿದೆ ಎಂದರು.
ನನ್ನೆಲ್ಲಾ ಹಳೆಯ ಸ್ನೇಹಿತರನ್ನು ಮತ್ತು ಈ ಸಂಸ್ಥೆಯಲ್ಲಿ ಕಲಿತ ಇತರೆ ಹಿರಿಯ ಹಾಗೂ ಕಿರಿಯ ಮಿತ್ರರನ್ನು ನೋಡಿ ನನಗೆ ಅತೀವ ಸಂತೋಷವಾಗುತ್ತಿದೆ. ನಾನು ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಕೆ.ಆರ್.ಪೇಟೆ ಒಂದು ಪುಟ್ಟಹಳ್ಳಿಯಂತಿತ್ತು. ಸಂಜೆಯಾದರೆ ಸಾಕು ರಸ್ತೆಗಳಲ್ಲಿ ಜನ ಸಂಚಾರ ಇರುತ್ತಿರಲಿಲ್ಲ ಎಂದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಿದರೆ ಅದರ ಯಶಸ್ಸು ಕಲಿತ ಶಾಲೆ ಮತ್ತು ಕಲಿಸಿದ ಗುರುಗಳಿಗೆ ಸಲ್ಲುತ್ತದೆ. 1958ರಲ್ಲಿ ಆರಂಭವಾದ ಇಲ್ಲಿನ ಪಾಲಿಟೆಕ್ನಿಕ್ ಮಂಡ್ಯ ಜಿಲ್ಲೆಯ ಮೊಟ್ಟ ಮೊದಲ ತಾಂತ್ರಿಕ ಶಿಕ್ಷಣ ಸಂಸ್ಥೆ ಒಂದು ಹೈಸ್ಕೂಲ್ ತರುವುದೇ ಕಷ್ಟಕರವಾಗಿದ್ದ ಕಾಲಘಟ್ಟದಲ್ಲಿ ದಿ.ಎಂ.ಕೆ.ಬೊಮ್ಮೇಗೌಡರು ಸರ್ಕಾರಿ ಪಾಲಿಟೆಕ್ನಿಕ್ ಆರಂಭಿಸಿ ಗ್ರಾಮೀಣ ಪ್ರದೇಶದ ಸಾವಿರಾರು ಬಡವರ ಮಕ್ಕಳು ಎಂಜಿನಿಯರ್‌ಗಳಾಗಲು, ಉದ್ಯಮಿಗಳಾಗಿ ರೂಪುಗೊಳ್ಳಲು ಕಾರಣಕರ್ತರಾಗಿದ್ದಾರೆ ಎಂದರು.
ಇದೇ ವೇಳೆ ಸಚಿವ ಎನ್.ಚಲುವರಾಯಸ್ವಾಮಿ ದಂಪತಿ, ಶಾಸಕ ಎಚ್.ಟಿ.ಮಂಜು ಸೇರಿದಂತೆ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗೌರವಿಸಲಾಯಿತು. ಕಲಾವಿದರಾದ ಕಂಬದ ರಂಗಯ್ಯ, ವ್ಯಾಸರಾಜ್ ಸೋಸಲೆ, ಶಮಿತಾ ಮಲ್ನಾಡ್, ಹರ್ಷ ರಂಜಿನಿ ಮೊದಲಾದವರಿಂದ ಸಂಗೀತ ಸಂಜೆ ನಡೆಸಲಾಯಿತು.