ಕನ್ನಡಪ್ರಭವಾರ್ತೆ, ಹಾಸನ
ಗ್ರಾಮದ ರೈತ ಆರ್. ಶಿವಣ್ಣ ಮಾತನಾಡಿ, 1992ರಲ್ಲಿ ಅತಿ ಕಡಿಮೆ ಪರಿಹಾರ ನೀಡಿ ಕೆಐಎಡಿಬಿ ವತಿಯಿಂದ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ತಮ್ಮ ಕುಟುಂಬ ಹಾಗೂ ಇತರ ರೈತರು ಇದೇ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಈ ಜಮೀನು ನಮ್ಮ ಬದುಕಿನ ಆಧಾರವಾಗಿದ್ದು, ಇದನ್ನು ಕಳೆದುಕೊಂಡರೆ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಅವರು ನೋವು ವ್ಯಕ್ತಪಡಿಸಿದರು.
ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಉಚ್ಚ ನ್ಯಾಯಾಲಯವು ಎರಡು ಬಾರಿ ರೈತರ ಪರವಾಗಿ ತೀರ್ಪು ನೀಡಿದೆ. ಜಮೀನನ್ನು ಉಳಿಸಿಕೊಳ್ಳುವಂತೆ ಸ್ಪಷ್ಟ ಆದೇಶಗಳಿದ್ದರೂ ಕೆಐಎಡಿಬಿ ಅಧಿಕಾರಿಗಳು ಆ ಆದೇಶ ಗಾಳಿಗೆ ತೂರಿ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಆರೋಪಿಸಿದರು.ಹಿಂದೆಯೂ ಈ ಪ್ರದೇಶದಲ್ಲಿ ಡೈರಿ ನಿರ್ಮಾಣ ಮಾಡಲು ಪ್ರಯತ್ನ ನಡೆದಾಗ ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದರು. ಆದರೂ ಇದೀಗ ಯಾವುದೇ ಮುನ್ಸೂಚನೆ ನೀಡದೆ ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಬಂದು ಜಮೀನು ಅಳತೆ ಮಾಡುವ ಕಾರ್ಯ ಆರಂಭಿಸಿರುವುದು ಸರಿಯಲ್ಲ ಎಂದರು.
ನ್ಯಾಯಾಲಯದ ಆದೇಶವನ್ನೇ ಪಾಲಿಸದಿದ್ದರೆ ಸಾಮಾನ್ಯ ರೈತರಿಗೆ ನ್ಯಾಯ ಸಿಗುವುದು ಹೇಗೆ? ಎಂದು ಪ್ರಶ್ನಿಸಿದ ರೈತರು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಹಸ್ತಕ್ಷೇಪ ಮಾಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶ್ರೀನಿವಾಸ್, ಪರ್ಶಿ, ಹರೀಶ್, ಭಾಗ್ಯ, ಕೆಂಪೇಗೌಡ, ಮಂಜೇಗೌಡ, ಮಧು, ನಾಗರಾಜು, ರಾಜಣ್ಣ ಇತರರು ಉಪಸ್ಥಿತರಿದ್ದರು.