ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಪುಡಿ ರೌಡಿಗಳ ಹಾವಳಿ ದಿನೇ ದಿನೇ ಮಿತಿ ಮೀರುತ್ತಿದೆ. ಒಂದೇ ರಾತ್ರಿ ನಗರದ ಮೂರು ಬಡಾವಣೆಗಳ ಮೂರು ಮನೆಗಳಿಗೆ ಕಾರುಗಳಲ್ಲಿ ತೆರಳಿದ ಕಿಡಿಗೇಡಿಗಳು ಮನೆಯ ಮುಖ್ಯ ದ್ವಾರಕ್ಕೆ ಹಾಗೂ ಸ್ಕೂಟರ್‌ವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಲಾಂಗ್‌ಗಳನ್ನು ಝಳಪಿಸಿ ಪುಂಡಾಟ ಮೆರೆದಿರುವ ಘಟನೆ ನಡೆದಿದೆ.ನಗರದ ಹೊಸಹಳ್ಳಿ, ಗಾಂಧಿನಗರ ಹಾಗೂ ಕ್ರಿಶ್ಚಿಯನ್ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ. ಮೂರು ಮನೆಯವರು ನೀಡಿದ ದೂರನ್ನು ಆಧರಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.ಶಶಾಂಕ್, ಧನುಷ್, ಜಯಂತ್, ವರದ, ಮುತ್ತ, ಹೃತೇಷ್ ಬಂಧಿತ ಆರೋಪಿಗಳು. ಗಾಂಧೀನಗರ ಐದನೇ ಕ್ರಾಸ್‌ನ ಭಾಗ್ಯ, ಹೊಸಹಳ್ಳಿಯ ಆದರ್ಶ ಸ್ಕೂಲ್ ಸಮೀಪದ ಕವಿತಾ ಹಾಗೂ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಅ. 6ರಂದು ರಾತ್ರಿ 10.45ರ ಸಮಯಕ್ಕೆ ಹೊಸಹಳ್ಳಿಯ ಆದರ್ಶಸ್ಕೂಲ್ ಸಮೀಪವಿರುವ ಕವಿತಾ ಅವರ ಮನೆಯ ಬಳಿಗೆ ಕಾರೊಂದರಲ್ಲಿ ಬಂದಿಳಿದ ಶಶಾಂಕ್, ಧನುಷ್, ಜಯಂತ್, ವರದ ಮತ್ತಿತರರು ಮನೆಯ ಮುಂದೆ ನಿಂತಿದ್ದ ಹೊಂಡಾ ಆ್ಯಕ್ಟೀವಾ ಸ್ಕೂಟರ್‌ಗೆ ಲಾಂಗ್‌ನಿಂದ ಹೊಡೆಯುತ್ತಿದ್ದರು. ಇದನ್ನು ಕಂಡು ಗಾಬರಿಗೊಂಡ ಮನೆಯೊಳಗಿದ್ದ ಕವಿತಾ, ಪತಿ ಮಧುಕುಮಾರ್, ಮಗಳು ಯಾನಿಕಾ ಭಯದಿಂದ ಕಿರುಚಿಕೊಂಡರು. ಆದರೂ ಆರೋಪಿಗಳು ಸ್ಕೂಟರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಹೊರಟುಹೋದರು. ಅಲ್ಲದೆ, ಮತ್ತೆ ಅದೇ ಕಾರಿನಲ್ಲಿ ವಾಪಸ್ ಬಂದ ಆರೋಪಿಗಳು ಕೈಯ್ಯಲ್ಲಿ ಲಾಂಗ್‌ಗಳನ್ನು ಹಿಡಿದು ತೋರಿಸಿ ನಿಮ್ಮ ಮಗನ ತಲೆ ತೆಗೆಯದೇ ಬಿಡುವುದಿಲ್ಲ ಎಂದು ಕಿರುಚಾಡಿ ಹೊರಟುಹೋದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಬಳಿಕ ಇದೇ ಆರೋಪಿಗಳು ಗಾಂಧಿನಗರ ಐದನೇ ಕ್ರಾಸ್‌ನಲ್ಲಿರುವ ಭಾಗ್ಯ ಎಂಬುವರ ಮನೆಗೆ ರಾತ್ರಿ 11.45ರ ವೇಳೆಗೆ ಕಾರಿನಲ್ಲಿ ಬಂದಿಳಿದರು. ಹೃತೇಶ್ ಎಂಬಾತ ಮನೆಯ ಗೇಟ್ ಜಿಗಿದು ಮೇಲೇರಿದನು. ಅವನ ಕೈಯ್ಯಲ್ಲಿ ಒಂದು ಚಿಕ್ಕ ಬಾಟಲ್ ಇತ್ತು. ಅದನ್ನು ನೋಡಿ ಭಯಗೊಂಡ ಭಾಗ್ಯರವರು ಏಕೆ ಮನೆಗೆ ನುಗ್ಗುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಕಾರಿನಲ್ಲಿದ್ದ ವರದ, ಸುಭಾಷ್ ಹಾಗೂ ಇನ್ನಿಬ್ಬರು ಬೇಗ ಹೋಗು ಪೆಟ್ರೋಲ್ ಸುರಿದು ಬೆಂಕಿ ಹಾಕುವಂತೆ ಕೂಗಿ ಹೇಳಿದರು. ಅವರು ಕೈಯ್ಯಲ್ಲಿ ಲಾಂಗ್‌ಗಳನ್ನು ಹಿಡಿದಿದ್ದರು. ಜಯಂತ್ ಮನೆಯ ಒಂದನೇ ಮಹಡಿಯ ಮುಖ್ಯ ಬಾಗಿಲಿಗೆ ಪೆಟೋಲ್ ಹಾಕಿ ಬೆಂಕಿ ಹಚ್ಚಿ ಕೆಳಗಿಳಿದನು.ಇದನ್ನು ಕಂಡು ಭಯದಿಂದ ಕಿರುಚಿದಾಗ ನಿನ್ನ ಮಗನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೇಳಿ ಕೊಲೆ ಬೆದರಿಕೆ ಹಾಕಿ ವಾಪಸ್ ಕಾರಿನಲ್ಲಿ ಹೊರಟುಹೋದರು ಎಂದು ಭಾಗ್ಯ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಅಲ್ಲಿಂದ ಲೇಬರ್ ಕಾಲೋನಿಯ ಎರಡನೇ ಕ್ರಾಸ್‌ನಲ್ಲಿರುವ ಮಂಜು ಅವರ ಮನೆಗೆ ತೆರಳಿದ ಧನುಷ್, ಸುಭಾಷ್, ಸುದೀಪ್, ಸಂಪತ್, ವರದ, ಶಶಾಂಕ್ ಮತ್ತಿತರರು ಮನೆಯ ಮುಂಬಾಗಿಲನ್ನು ಒಡೆಯುತ್ತಿದ್ದ ಶಬ್ಧ ಕೇಳಿ ಮಂಜು ಕಿಟಕಿ ಬಳಿ ನಿಂತು ನೋಡಿದ್ದಾರೆ. ಬಿಳಿಯ ಬಣ್ಣದ ಕಾರು ಮನೆ ಎದುರು ನಿಂತಿತ್ತು. ಧನುಷ್ ಎಂಬಾತ ಕೈಯ್ಯಲ್ಲಿ ಲಾಂಗ್ ಹಿಡಿದು ಮನೆಯ ಬಾಗಿಲಿಗೆ ಹೊಡೆದನು. ಬಾಗಿಲು ತೆಗೆದು ಹೊರಬರಲು ಮಂಜು ಪ್ರಯತ್ನಿಸಿದಾಗ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಆಗ ಸುಭಾಷ್‌ನು ಕೈಯ್ಯಲ್ಲಿ ಒಂದು ಪೆಟ್ರೋಲ್ ತುಂಬಿರುವ ಪ್ಲಾಸ್ಟಿಕ್ ಬಾಟಲ್ ಹಿಡಿದುಕೊಂಡು ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದನು. ಇದರಿಂದ ಮನೆಯ ಬಾಗಿಲಿಗೆ ಬೆಂಕಿ ಹಚ್ಚಿಕೊಂಡು ಉರಿಯಲಾರಂಭಿಸಿತು. ಬಾಗಿಲು ತೆಗೆದು ಹೊರಬರುವಷ್ಟರಲ್ಲಿ ಅವರು ಕಾರಿನ ಸಮೇತ ಸ್ಥಳದಿಂದ ಹೊರಟುಹೋದರು. ಮತ್ತೆ ಅದೇ ಕಾರಿನಲ್ಲಿ ಮನೆಯ ಮುಂದಿನ ರಸ್ತೆಯಲ್ಲಿ ರೌಂಡ್ಸ್ ಹಾಕುತ್ತಾ ಕಾರಿನಲ್ಲಿದ್ದ ಧನುಷನು ತನ್ನ ಕೈಯ್ಯಲ್ಲಿ ಲಾಂಗ್ ಹಿಡಿದುಕೊಂಡು ಕಾರಿನಿಂದ ಹೊರಗೆ ಕೈ ಹಾಕಿ ಲಾಂಗ್‌ನ್ನು ರಸ್ತೆಯಲ್ಲಿ ಎಳೆದಾಡಿಸಿಕೊಂಡು ಹೊರಟುಹೋದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಮೂವರು ನೀಡಿರುವ ದೂರುಗಳನ್ನು ದಾಖಲಿಸಿಕೊಂಡಿರುವ ಪೂರ್ವ ಮತ್ತು ಪಶ್ಚಿಮಠಾಣೆ ಪೊಲೀಸರು ಕಾರು ಓಡಾಡಿದ ಸಿಸಿ ಟೀವಿ ದೃಶ್ಯಾವಳಿಗಳನ್ನು ಆಧರಿಸಿ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂರು ಮನೆಗಳಲ್ಲಿರುವ ಯುವಕರು ಹಿಂದೊಮ್ಮೆ ಕಾರಿನ ಗಾಜನ್ನು ಜಖಂಗೊಳಿಸಿ ಕೆಲವರ ಮೇಲೆ ಹಲ್ಲೆ ನಡೆಸಿದ್ದರು. ಅದೇ ದ್ವೇಷವನ್ನು ಮುಂದಿಟ್ಟುಕೊಂಡು ಮನೆಯ ಬಳಿ ಬಂದು ದಾಂಧಲೆ ನಡೆಸಿದ್ದಾರೆ. ಬಂಧಿತರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.--------ಮಂಡ್ಯದ ಕ್ರಿಶ್ಚಿಯನ್ ಕಾಲೋನಿ, ಗುತ್ತಲು ಕಾಲೋನಿ, ಗಾಂಧಿನಗರ ಮತ್ತು ಹೊಸಹಳ್ಳಿಯಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಆ ಬಡಾವಣೆಗಳಲ್ಲಿ ರಾತ್ರಿ ಸಮಯದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ. ಮೂರು ದಿನಗಳ ಹಿಂದೆ ಮನೆಗಳ ಬಾಗಿಲು ಹಾಗೂ ಸ್ಕೂಟರ್‌ಗೆ ಬೆಂಕಿ ಹಚ್ಚಿ ಲಾಂಗ್ ಹಿಡಿದು ಓಡಾಡಿದವರ ಪೈಕಿ ೬ ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಕೃತ್ಯವೆಸಗಿದ್ದಾರೆ. ಪುಡಿ ರೌಡಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರಕ್ಷಕ ಅಧೀಕ್ಷಕರು, ಮಂಡ್ಯ