ಅಕ್ರಮ ಮದ್ಯ ಸಾಗಾಟ ಯತ್ನ: 17 ಲಕ್ಷ ಮೌಲ್ಯದ ಸ್ವತ್ತು ಜಪ್ತಿ

KannadaprabhaNewsNetwork |  
Published : Jul 01, 2026, 03:00 AM IST
 | Kannada Prabha

ಸಾರಾಂಶ

ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವೊಂದನ್ನು ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇದಿಸಿದ್ದಾರೆ.

ಕಾರವಾರ: ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವೊಂದನ್ನು ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು ₹17 ಲಕ್ಷ ಮೌಲ್ಯದ ಮದ್ಯ ಹಾಗೂ ಸರಕು ಸಾಗಣೆ ವಾಹನವನ್ನು ಜಪ್ತಿ ಮಾಡಲಾಗಿದ್ದು, ಕೇರಳ ಮೂಲದ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಜೂನ್ 28ರಂದು ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಅಬಕಾರಿ ಅಧಿಕಾರಿಗಳಿಗೆ ಗೋವಾ ಕಡೆಯಿಂದ ಬರುತ್ತಿದ್ದ ಅಶೋಕ್ ಲೇಲ್ಯಾಂಡ್ ಲಾರಿಯ ಮೇಲೆ ಸಂಶಯ ಮೂಡಿದೆ. ತಕ್ಷಣ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ಯಾವುದೇ ಅಧಿಕೃತ ಪರವಾನಗಿ ಇಲ್ಲದೆ 150 ಬಾಕ್ಸ್‌ಗಳಲ್ಲಿ ತುಂಬಿದ್ದ ವಿವಿಧ ಬ್ರಾಂಡ್‌ನ ಒಟ್ಟು 1,296 ಲೀಟರ್ ಐಎಂಎಲ್ ಮದ್ಯ ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಮದ್ಯದ ಅಂದಾಜು ಮೌಲ್ಯ ₹9 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಕ್ರಮ ಮದ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರಿಯಾ ಗ್ರಾಮದ ನಿವಾಸಿ ಮನ್ಸೂರ್ ಮುಹಮ್ಮದ್ (32) ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ₹8 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ಸರಕು ಸಾಗಣೆ ವಾಹನವನ್ನು ಸಹ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಮದ್ಯವನ್ನು ಎಲ್ಲಿಂದ ತರುತ್ತಿದ್ದ ಮತ್ತು ಇದನ್ನು ಯಾರಿಗೆ ತಲುಪಿಸಲು ಉದ್ದೇಶಿಸಿದ್ದ ಎಂಬ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ-1965ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಡಿ ಭಾಗದಲ್ಲಿ ಅಕ್ರಮ ಮದ್ಯ ಸಾಗಾಟ ತಡೆಯಲು ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರ ಚೀಟಿ ಇಲ್ಲದಿದ್ದರೆ ಸರ್ಕಾರಿ ಸೌಲಭ್ಯ ಸಿಗಲ್ಲ: ಶಾಸಕ ಭೀಮಣ್ಣ ನಾಯ್ಕ
ಮತದಾನ ಹಕ್ಕು ಪಡೆಯುವುದು ನಮ್ಮೆಲ್ಲರ ಜವಾಬ್ದಾರಿ: ಶಾಸಕ ಭೀಮಣ್ಣ ನಾಯ್ಕ