ಕಾರವಾರ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ ನಾಡಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಜಿಲ್ಲೆಯ ಅಂಕೋಲಾ ಮೂಲದ ಯುವಕ ನಾಗೇಂದ್ರ ಗೌಡನ ಕುಟುಂಬಕ್ಕೆ ಅಂಕೋಲಾ ತಹಸೀಲ್ದಾರ್ ನಿಶ್ಚಲ್ ನರೋನಾ ಅವರು ಮಾನವೀಯತೆಯ ಆಧಾರದ ಮೇಲೆ ಸ್ಪಂದಿಸಿದ್ದಾರೆ. ಶೋಕತಪ್ತ ಕುಟುಂಬದ ಮನೆಗೇ ಪಡಿತರ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
ಹಾಲಕ್ಕಿ ಗೌಡರ ಸಂಪ್ರದಾಯದ ಪ್ರಕಾರ, ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಕುಟುಂಬದ ಸದಸ್ಯರು 12 ದಿನಗಳ ಕಾಲ ಮನೆಯಿಂದ ಹೊರಬರುವಂತಿಲ್ಲ. ಈ ಸಂಪ್ರದಾಯದಿಂದಾಗಿ ತಿಮ್ಮಪ್ಪ ಗೌಡ ಅಥವಾ ಅವರ ಸಹೋದರನಿಗೆ ಪಡಿತರ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡಿ ಅಕ್ಕಿ ತರಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ಊಟಕ್ಕೆ ಅಕ್ಕಿಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಮ್ಮ ಕಷ್ಟ ಕೇಳುವವರು ಯಾರು ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದರು.
ಬಡ ಕುಟುಂಬದ ಈ ದಯನೀಯ ಸ್ಥಿತಿ ತಹಸೀಲ್ದಾರ್ ನಿಶ್ಚಲ್ ನರೋನಾ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಸರ್ಕಾರದ ನಿಯಮದಂತೆ ಬಯೋಮೆಟ್ರಿಕ್ ಕಡ್ಡಾಯವಾಗಿದ್ದರೂ, ಈ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿದ ಅವರು ಆಹಾರ ಇಲಾಖೆಯ ಸಿಬ್ಬಂದಿ ಹಾಗೂ ಪಡಿತರ ಅಂಗಡಿಯವರನ್ನು ಸಂಪರ್ಕಿಸಿದರು. ಬಯೋಮೆಟ್ರಿಕ್ ಪಡೆಯದೆಯೇ ಈ ತಿಂಗಳ ಪೂರ್ಣ ಪಡಿತರವನ್ನು ರಾಜನಗುಳಿಯಲ್ಲಿರುವ ಸಂತ್ರಸ್ತ ಕುಟುಂಬದ ಮನೆಗೇ ತಲುಪಿಸುವಂತೆ ಸೂಚಿಸಿ, ಹಸಿದ ಹೊಟ್ಟೆಗೆ ಅನ್ನ ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.ಸರಿಯಾದ ರಸ್ತೆ ಸಂಪರ್ಕವೂ ಇಲ್ಲದ ಕುಗ್ರಾಮಕ್ಕೆ ಅಧಿಕಾರಿಗಳೇ ಖುದ್ದಾಗಿ ಸ್ಪಂದಿಸಿ ಪಡಿತರ ಒದಗಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.