ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಆಷಾಢ ಹೊಸ್ತಿಲಲ್ಲೂ ಮಳೆ ಕೈಕೊಟ್ಟಿರುವ ಪರಿಣಾಮ ಹೊಲದಲ್ಲಿನ ಹಸಿರು ಮಾಯವಾಗಿದ್ದು, ಅನ್ನದಾತನ ಮುಖದಲ್ಲಿ ಆತಂಕದ ಛಾಯೆ ಆವರಿಸಿದೆ. ಮಳೆ ಬರಲಿ ಎಂದು ಪ್ರತಿದಿನ ಆಕಾಶದತ್ತ ಕಣ್ಣಿಟ್ಟಿರುವ ರೈತರು, ಈಗ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ.
ಅಶ್ವಿನಿ, ಭರಣಿ, ಕೃತಿಕಾ, ಮೃಗಶಿರ ಕಳೆದು ಹೋದರೂ ನಿರೀಕ್ಷಿತ ಮಳೆಯಾಗಿಲ್ಲ. ಆರಂಭದಲ್ಲಿ ಸುರಿದ ಒಂದೆರಡು ಮಳೆ ನಂಬಿ ರೈತರು ತೊಗರಿ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಪೂರ್ಣಗೊಳಿಸಿದ್ದರು. ಆದರೆ ನಂತರ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಹೊಲದಲ್ಲಿನ ತೇವಾಂಶ ಕಣ್ಮರೆಯಾಗಿ ಬೆಳೆಗಳು ಬಾಡತೊಡಗಿವೆ.ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ರೈತ ವೀರನಗೌಡ ಪೊಲೀಸ್ ಪಾಟೀಲ ಅವರು ಸುಮಾರು ಎಂಟು ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತಿದ್ದಾರೆ. ಮಳೆ ಬಾರದ ಕಾರಣ ಗಿಡಗಳು ಒಣಗಲು ಆರಂಭಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ವೆಚ್ಚವಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿ ಬೆಳೆಗೆ ಹಾಯಿಸುತ್ತಿದ್ದಾರೆ.
ಬಿತ್ತಿದ ಬೆಳೆಗೆ ನೀರಿಲ್ಲ: ಈ ಬಾರಿ ರೈತರು ಸಾಲ ಸೋಲ ಮಾಡಿ ಬೀಜ, ಗೊಬ್ಬರ, ಔಷಧ ಖರೀದಿಸಿ ಬಿತ್ತನೆ ನಡೆಸಿದ್ದರು. ಆದರೆ ಮಳೆ ವೈಫಲ್ಯದಿಂದ ಅನೇಕ ಹೊಲಗಳಲ್ಲಿ ಬೀಜ ಮೊಳಕೆ ಒಡೆಯದೆ ಮಣ್ಣಿನಲ್ಲೇ ಉಳಿದಿದೆ.ಇನ್ನೂ ಕೆಲವು ಕಡೆ ಮೊಳಕೆಯೊಡೆದ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡುತ್ತಿವೆ. ಇದರಿಂದ ಮುಂಗಾರು ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿವೆ.
ಸೂಕ್ತ ಪರಿಹಾರ ಘೊಪಿಸಿ: ಮಳೆ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಪ್ರತಿ ವರ್ಷ ಬೆಳೆ ವಿಮೆ ಮಾಡಿಸಿಕೊಂಡರೂ ನಷ್ಟಕ್ಕೆ ಅನುಗುಣವಾಗಿ ವಿಮೆ ಮೊತ್ತ ಸಿಗುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಬಾರಿ ಬೆಳೆ ಹಾನಿ ಹೆಚ್ಚಿರುವುದರಿಂದ ವಿಮೆ ಮೊತ್ತ ವಿಳಂಬವಿಲ್ಲದೆ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.