ಕೊಪ್ಪಳ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಬಿಎಲ್‌ಓ, ಎಸ್ಐಆರ್ ಅರ್ಜಿ ನೀಡಲಿದ್ದು, ಎಲ್ಲ ಮತದಾರರು ಗಣತಿ ನಮೂನೆ ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಹೇಳಿದರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿದ್ದು,ಜೂ.30ರಿಂದ ಜು. 29ರವರೆಗೆ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಓ) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ. ಮತದಾರರು ಎಸ್‌ಐಆರ್ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿರುವ ಹೆಸರು ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ನಡೆಯಲಿದೆ. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗಣತಿ ನೋಂದಣಿ ಅರ್ಜಿಗೆ ಮತದಾರ ಕುಟುಂಬದವರು ಯಾರಾದರೂ ಸಹಿ ಮಾಡಬಹುದು. ಈಗಾಗಲೇ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸಲು ಬಿಎಲ್‌ಓಗಳು ಹಾಗೂ ಬಿಎಲ್‌ಎಗಳ ಸಭೆ, ತರಬೇತಿ ನಡೆಸಿ ಎಲ್ಲ ಮಾಹಿತಿ ನೀಡಲಾಗಿದೆ. ಬಿಎಲ್‌ಓ ಹಾಗೂ ಬಿಎಲ್‌ಎ ಸಮನ್ವಯದಿಂದ ಕೆಲಸ ಮಾಡಿದರೇ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯುವುದನ್ನು ತಪ್ಪಿಸಬಹುದು ಎಂದು ಹೇಳಿದರು.ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಚುನಾವಣಾ ಆಯೋಗದ ಸೂಚನೆಯಂತೆ ಎಸ್‌ಐಆರ್-2026ರ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಅಗತ್ಯ ಮಾಹಿತಿ ಒದಗಿಸಬೇಕು. ಒಬ್ಬ ಮತದಾರ ಎರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರು ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದೆ. ಪಟ್ಟಿಯಲ್ಲಿ ನೈಜ ಮತದಾರರ ಹೆಸರು ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಅರ್ಹ ಮತದಾರರು ಬಿಟ್ಟು ಹೋಗದಂತೆ ಅನರ್ಹ ಮತದಾರರು ಸೇರ್ಪಡೆ ಆಗದಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
ವಾಕ್ ಥಾನ್: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿಗಾಗಿ ನಗರದ ಪ್ರವಾಸಿ ಮಂದಿರದಿಂದ ಅಶೋಕ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳೊಂದಿಗೆ ವಾಕಥಾನ್ ಜಾಥಾ ನಡೆಯಿತು. ವಿದ್ಯಾರ್ಥಿಗಳು ಮತದಾನ ಹಾಗೂ ಎಸ್‌ಐಆರ್ ಕುರಿತು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.