ಕುಷ್ಟಗಿ: ಎಸ್ಐಆರ್ ಹೆಸರಿನಲ್ಲಿ ದೇಶದಲ್ಲಿ ಮತದಾರರ ಹಕ್ಕಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.
ನೂರು ವರ್ಷಗಳ ಇತಿಹಾಸ ಹೊಂದಿರುವ ಆರ್‌ಎಸ್‌ಎಸ್‌ಗೆ ಇದುವರೆಗೂ ಯಾವುದೆ ತರಹದ ನೋಂದಣಿಯೇ ಇಲ್ಲ. ಆದರೆ ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಜನರ ಮತದಾನದ ಹಕ್ಕಿನ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಮತವೇ ಜನರ ಶಕ್ತಿ. ಆ ಹಕ್ಕನ್ನೇ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿರುವುದರಿಂದ ಕಾಂಗ್ರೆಸ್ ಬಿಎಲ್ಎ-2 ಗಳು ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ. ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಅಧಿಕಾರದಿಂದ ಕೆಳಗಿಳಿಸುವ ಕೆಲಸ ಮಾಡಬೇಕು ಎಂದರು.
ಬಿಎಲ್ಎ-2ಗಳು ಚುನಾವಣಾ ಆಯೋಗದ ಎಲ್ಲ ಅರ್ಜಿ ನಮೂನೆ, ನಿಯಮ ಹಾಗೂ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದರು.ಎಸ್ಐಆರ್ ಪ್ರಕ್ರಿಯೆಯ ಪರಿಣಾಮವಾಗಿ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳು ಸೋಲು ಕಂಡಿವೆ ಎಂದ ಅವರು, ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಆದ ಹಿನ್ನಡೆಗೆ ಎಸ್ಐಆರ್ ಕಾರಣವಾಗಿದೆ ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಚುನಾವಣಾ ಪ್ರಕ್ರಿಯೆಯಲ್ಲಿ ಬಿಎಲ್ಎ-2ಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಚುನಾವಣಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮತದಾರರ ಪಟ್ಟಿಯಲ್ಲಿನ ಪ್ರತಿಯೊಂದು ಬದಲಾವಣೆ ಪರಿಶೀಲಿಸಬೇಕು. ನೈಜ ಮತದಾರರ ಹೆಸರು ಕೈಬಿಡದಂತೆ ಹಾಗೂ ನಕಲಿ ಹೆಸರು ಸೇರ್ಪಡೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ವಕ್ತಾರೆ ಶೈಲಜಾ ಹಿರೇಮಠ ಬಿಎಲ್ಎ2 ಗಳಿಗೆ ತರಬೇತಿ ನೀಡಿ ಮಾತನಾಡಿ, ಎಸ್ಐಆರ್ ಎನ್ನುವುದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಇದು ಮತದಾರರ ಹಕ್ಕಿನ ಪ್ರಶ್ನೆಯಾಗಿದೆ ಪ್ರಜಾಪ್ರಭುತ್ವವನ್ನು ದೇಶಕ್ಕೆ ನೀಡಿದ ಕಾಂಗ್ರೆಸ್ ಪಕ್ಷವೇ ಇಂದು ಅದನ್ನು ಉಳಿಸಿಕೊಳ್ಳುವ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಈಗಾಗಲೆ ಸುಮಾರು 13 ರಾಜ್ಯಗಳ ಪೈಕಿ 6.5 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲಿ 7.5 ಲಕ್ಷ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದ ಅವರು, ಈ ಹಿನ್ನೆಲೆ ಪ್ರತಿಯೊಬ್ಬ ಬಿಎಲ್ಎ-2 ಮನೆಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಿ ಅಗತ್ಯ ದಾಖಲೆ ಪರಿಶೀಲಿಸಿ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಸೋಮಶೇಖರ ವೈಜಾಪೂರು, ಶೇಖರಗೌಡ ಮಾಲಿಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹ್ಯಾರಿಸ್, ರಾಕೇಶಕುಮಾರ, ಮೈನೂದ್ದಿನ್ ಮುಲ್ಲಾ, ಫಾರೂಕ ಡಾಲಾಯತ್, ಶಕುಂತಲಾ ಹಿರೇಮಠ, ಶಿವಶಂಕರಗೌಡ ಕಡೂರು, ದೊಡ್ಡಬಸವ ಬಯ್ಯಾಪೂರ, ಲಾಡ್ಲೇಮಷಾಕ ದೋಟಿಹಾಳ, ಈರಣ್ಣ ಗಡಾದ, ಅಯ್ಯಪ್ಪ ಹವಾಲ್ದಾರ, ಕೇದಾರನಾಥ ತುರಕಾಣಿ, ಇಮಾಮಸಾಬ್ ಗರಡಿಮನಿ, ಹನುಮೇಶ ಗುಮಗೇರಿ, ಕರಿಸಿದ್ದಪ್ಪ ಪಟ್ಟಣಶೆಟ್ಟಿ, ವಿರೇಶ ಕಮ್ಮಾರ, ವೆಂಕಟೇಶ ಚವ್ಹಾಣ ಸೇರಿದಂತೆ ಬ್ಲಾಕ್ ಸಮಿತಿಯ ಅಧ್ಯಕ್ಷರು, ಯುಥ್ ಕಾಂಗ್ರೇಸ್ ಕಮೀಟಿಯ ಪದಾಧಿಕಾರಿ, ನೂರಾರು ಜನ ಬಿಎಲ್ಎ2 ಏಜೇಂಟರು ಇದ್ದರು.