ಲಕ್ಷ್ಮೇಶ್ವರ: ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಜಲಾಭಿಷೇಕ ಮತ್ತು ಪೂಜಾ ಕೈಂಕರ್ಯಗಳನ್ನು ಸೋಮವಾರ ಬೆಳಗ್ಗೆ ೬ ಗಂಟೆಯಿಂದ ಪ್ರಾರಂಭವಾಯಿತು.
ತಾಲೂಕಿನಲ್ಲಿ ವರುಣನ ಅವಕೃಪೆಯ ಸಂದರ್ಭಗಳಲ್ಲಿ, ರೈತರ ಒಳಿತಿಗಾಗಿ ಮತ್ತು ಉತ್ತಮ ಮಳೆ- ಬೆಳೆಗಾಗಿ ಊರಿನ ಜನರು ಹಾಗೂ ಭಕ್ತರು ಒಟ್ಟಾಗಿ ಸೇರಿ ಜಲಾಭಿಷೇಕ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆಯನ್ನು ನೆರವೇರಿಸುವುದು ವಾಡಿಕೆ. ಈ ಬಾರಿ ಬಹುತೇಕ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವುದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆ ಪಟ್ಟಣದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ, ದೇವಸ್ಥಾನ ಅರ್ಚಕರ ಸಮಿತಿ, ಸೋಮೇಶ್ವರ ಜಾತ್ರಾ ಕಮಿಟಿಯವರು ಸೇರಿ ಸೋಮೇಶ್ವರನಿಗೆ ನಿರಂತರವಾಗಿ ೨೪ ಗಂಟೆಗಳ ಕಾಲ ಜಲಾಭೀಷೇಕ ಮತ್ತು ವಿಶೇಷ ಪೂಜೆ, ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದೆ. ಸೋಮವಾರ ಮುಂಜಾನೆ ಅರ್ಚಕ ಚಿಕ್ಕರಸ ಪೂಜಾರ, ರಾಘವೇಂದ್ರ ಪೂಜಾರ, ಕೃಷ್ಣಾಜಿ ಪೂಜಾರ ಅವರ ನೇತೃತ್ವದಲ್ಲಿ ರುದ್ರಾಭಿಷೇಕದ ಮೂಲಕ ವಿಶೇಷ ಪೂಜೆ ಆರಂಭಿಸಿದರು.ಪೂಜೆ ನಂತರ ಪ್ರಸಾದವನ್ನು ವಿತರಿಸಲಾಯಿತು. ಮಳೆಗಾಗಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವಸ್ಥಾನದ ಆವರಣದಲ್ಲಿ ಕುಳಿತುಕೊಂಡು ಭಕ್ತಿಯಿಂದ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ ಭಜನೆ ಮಾಡಿದರು. ಸೋಮವಾರ ಸಂಜೆಯಿಂದ ಅಹೋರಾತ್ರಿ ನೂರಾರು ಭಕ್ತರು ಸೇರಿ ಭಜನಾ ತಂಡಗಳೊಂದಿಗೆ ಆಗಮಿಸಿ ಭಕ್ತಿ ಸೇವೆ ಸಮರ್ಪಿಸಿದರು.