ಮಾರುತಿ ಶಿಡ್ಲಾಪೂರ
ತಾಲೂಕಿನಲ್ಲಿ ಶೇ. ೬೬ರಷ್ಟು ಮಳೆ ಕೊರತೆಗೆ ಪೈರು ನಲುಗಿದೆ. ಶೇ. ೮೦ರಷ್ಟು ಬಿತ್ತನೆ ಪೂರ್ಣವಾಗಿದ್ದು, ಭತ್ತದ ನಾಟಿಗೆ ರೈತರು ಕಾಯುತ್ತಿದ್ದಾರೆ. ಮುಗಿಲ ಕಡೆಗೆ ಮುಖ ಮಾಡಿ ಮಳೆಗಾಗಿ ಬೇಡಿಕೊಳ್ಳುವ ರೈತ ನಾಳೆಯ ಚಿಂತೆಯಲ್ಲಿದ್ದಾನೆ.
ತಾಲೂಕಿನಲ್ಲಿ ೪೬ ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ಇದರಲ್ಲಿ ಈಗಾಗಲೇ ೩೬ ಸಾವಿರ ಹೆಕ್ಟೇರ್‌ಗೂ ಅಧಿಕ ಭೂಮಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಆದರೆ ಬಿರು ಬಿಸಿಲಿಗೆ ಪೈರು ಮಾತ್ರ ಬಾಡಿ ರೈತರನ್ನು ಚಿಂತೆಗೀಡು ಮಾಡಿದೆ. ಜೂನ್ ತಿಂಗಳಿನ ವಾಡಿಕೆ ಮಳೆ ೧೦೫ ಮಿಮೀ ಆಗಬೇಕಾಗಿದ್ದರೂ ಬಿದ್ದ ಮಳೆ ಮಾತ್ರ ಕೇವಲ ೩೫ ಮಿಮೀ. ಶೇ.೬೬ರಷ್ಟು ಮಳೆ ಕೊರತೆ ಇದೆ. ತಿಂಗಳಾಚೆ ಬಿತ್ತನೆ ಮಾಡಿದ ಬೆಳೆಗಳು ಇನ್ನೂ ಸ್ವಲ್ಪ ಜೀವಂತವಾಗಿದ್ದರೂ ಕೂಡ ಇತ್ತೀಚೆಗೆ ಬಿತ್ತನೆ ಮಾಡಿದ ಪೈರು ಮಾತ್ರ ಮತ್ತೆ ಮಳೆಯಾದರೂ ಜೀವ ಪಡೆಯುವ ಲಕ್ಷಣಗಳಿಲ್ಲ. ಕಪ್ಪು ಭೂಮಿಯಲ್ಲಿ ಬಿತ್ತಿದ ಸೋಯಾ ಅವರೆ ಸ್ವಲ್ಪ ಮಟ್ಟಿಗೆ ಜೀವ ಹಿಡಿದುಕೊಂಡಿವೆ. ಆದರೆ ಕೆಂಪು ಭೂಮಿಯಲ್ಲಿ ಬಿತ್ತಿದ ಸೋಯಾ ಅವರೆ ಸೇರಿದಂತೆ ಯಾವ ಬೆಳೆಯೂ ಮತ್ತೆ ಮಳೆಯಾದರೂ ಸುಧಾರಿಸುವ ಸ್ಥಿತಿ ಇಲ್ಲ.ಕೊಳವೆ ಬಾವಿಗಳಿಂದ ಒಂದಷ್ಟು ಸ್ಪಿಂಕ್ಲರ್ ಮೂಲಕ ಭೂಮಿ ತೋಯಿಸಿ ಬೆಳೆ ಬದುಕಿಸಿಕೊಳ್ಳುವ ಕಾರ್ಯ ನಡೆದಿದೆ. ಕೊಳವೆಬಾವಿಯಲ್ಲಿ ನೀರು ಕೂಡ ಕಡಿಮೆಯಾಗಿರುವುದರಿಂದ ಅದು ಕೂಡ ಬೆಳೆ ಉಳಿಸಿಕೊಳ್ಳುವ ವಿಶ್ವಾಸವನ್ನು ಹೊಂದಿಲ್ಲ. ಈಗಾಗಲೇ ನೂರಾರು ಎಕರೆ ಭೂಮಿಯಲ್ಲಿನ ಬೆಳೆಯನ್ನು ಹರಗಿ ಬೇರೆ ಬಿತ್ತನೆಗೆ ಯೋಚಿಸುತ್ತಿದ್ದಾನೆ.
೨೨೮೯೫ ಹೆ. ಗೋವಿನ ಜೋಳ, ೮೫೯ ಹೆಕ್ಟೇರ್ ಶೇಂಗಾ, ೩೮೩೨ ಹೆ. ಸೋಯಾ ಅವರೆ, ೨೨೯ ಹೆ. ಹತ್ತಿ, ೨೭೪೦ ಹೆಕ್ಟೇರ್ ಕಬ್ಬು ಬಿತ್ತನೆಯಾಗಿದೆ. ಇನ್ನು ಹತ್ತು ಹನ್ನೆರಡು ದಿನಗಳಲ್ಲಿ ಒಳ್ಳೆಯ ಮಳೆಯಾಗದಿದ್ದರೆ ಎಲ್ಲ ಪೈರನ್ನು ಹರಗಿ ಮತ್ತೆ ಮಳೆ ನೋಡಿಕೊಂಡು ಮತ್ತೆ ಬಿತ್ತನೆ ಮಾಡುವ ಅನಿವಾರ್ಯತೆಗೆ ರೈತ ನಿಲ್ಲಬೇಕಾಗುತ್ತದೆ.
ಗೋವಿನ ಜೋಳ ಬಿತ್ತಿ ತಿಂಗಳಾಗಿದೆ. ಈಗಾಗಲೇ ಎದೆ ಮಟ್ಟಕ್ಕೆ ಬೆಳೆಯಬೇಕಾದ ಬೆಳೆ ನೆಲದಲ್ಲಿಯೇ ಇದೆ. ಒಣಗುತ್ತಿದೆ. ಉಳಿದ ಬೆಳೆಗಳೂ ಕೂಡ ದಿನ ಕಳೆದಿವೆ. ಆದೆ ಬೆಳೆದಿಲ್ಲ. ಈಗ ಮಳೆಯಾದರೂ ಕೂಡ ಬೆಳೆ ಸುಧಾರಿಸುವ ಸ್ಥಿತಿ ಇಲ್ಲ. ರೈತ ಮಾತ್ರ ಈ ವರ್ಷ ಆತಂಕಕ್ಕೆ ಈಡಾಗಿದ್ದಾನೆ. ಸರ್ಕಾರ ಈಗಲೇ ರೈತನ ಬಗ್ಗೆ ಯೋಚಿಸಬೇಕಾಗಿದೆ. ರೈತನ ಸಂಕಷ್ಟಕ್ಕೆ ನಿಲ್ಲುವ ಅನಿವಾರ್ಯತೆ ಸರ್ಕಾರಕ್ಕಿದೆ ಎಂದು ಇನಾಂಯಲ್ಲಾಪುರ ರೈತ ರುದ್ರಪ್ಪ ಹಣ್ಣಿ ಹೇಳಿದರು.