ರಾಣಿಬೆನ್ನೂರು: ನಾನು ಈಗಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ನನಗೆ ವಿಧಾನಸಭಾ ಹಂಗಾಮಿ ಅಧ್ಯಕ್ಷರಿಗಿಂತಲೂ ಸಚಿವನಾಗಿ ರಾಜ್ಯದ ಅಭಿವೃದ್ಧಿ ಮಾಡುವ ಕಳಕಳಿ, ಮಹಾದಾಸೆಯಿದೆ ಎಂದು ವಿಧಾನಸಭೆಯ ಹಂಗಾಮಿ ಅಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಉಪಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಡಿ.ಕೆ. ಶಿವಕುಮಾರ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಇಲ್ಲವೇ ಸಚಿವ ಸ್ಥಾನ ಹಂಚಿಕೆಯ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆ ನನಗಿದೆ. ಇದೀಗ ನಾನು ವಿಧಾನಸಭೆಯ ಹಂಗಾಮಿ ಅಧ್ಯಕ್ಷನಾಗಿದ್ದು, ನಾನು ಒಂದು ಪಕ್ಷದ ಪರವಾಗಿ ಮಾತನಾಡಲು ಬರುವುದಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳು ನನಗೆ ಸಚಿವ ಸ್ಥಾನ ನೀಡುವ ಅಗಾಧವಾದ ವಿಶ್ವಾಸವಿದ್ದು, ಅದಕ್ಕಾಗಿ ನಾನು ಕಾಯುವೆ. ಸಚಿವ ಸ್ಥಾನ ನೀಡುವ ಸಂಬಂಧ ನಾನು ಯಾರ ಮೇಲೂ ಯಾವುದೇ ರೀತಿಯ ಒತ್ತಡ, ಪ್ರಭಾವ ಬೀರಲು ಬರುವುದಿಲ್ಲ. ಕೈ ಹೈಕಮಾಂಡ್ ಬಳಿ ಕೇಳೋದಕ್ಕೂ ಆಗುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ಮುಖ್ಯಮಂತ್ರಿಗಳೇ ಸಚಿವ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದರು.
ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಥಾನ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಹಲವಾಗಲ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ರವೀಂದ್ರಗೌಡ ಪಾಟೀಲ, ಎಸ್ಪಿ ಯಶೋದಾ ಮಂಟಗೋಡಿ, ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ, ಡಿವೈಎಸ್ಪಿ ಜೆ. ಲೋಕೇಶ್, ಸಿಪಿಐಗಳಾದ ನಾಗಯ್ಯ ಕಾಡದೇವರ, ಎನ್. ವೆಂಕಟರೆಡ್ಡಿ, ಸಿದ್ದೇಶ್ ಹಾಗೂ ಸಿಬ್ಬಂದಿ ವರ್ಗ ಇದ್ದರು.