ಕನ್ನಡಪ್ರಭ ವಾರ್ತೆ, ತುಮಕೂರುನಗರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರು ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಿಸಬೇಕು ಎಂದು ಕೊಟ್ಟ ಕರೆ ಆಘಾತಕಾರಿಯೂ, ರೈತ ವಿರೋಧಿಯೂ, ಜಿಲ್ಲೆಗೆ ಇರುವ ಐತಿಹಾಸಿಕ ಹೆಸರಿಗೆ ಮಸಿ ಬಳಿಯುವ ಕುತಂತ್ರವೂ ಆಗಿದೆ ಎಂದು ಶಾಸಕ ಬಿ. ಸುರೇಶಗೌಡರು ಕಟುವಾಗಿ ಟೀಕಿಸಿದರು.ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜಿಲ್ಲೆಯಿಂದ ರಾಜಕೀಯವಾಗಿ ಎಲ್ಲವನ್ನೂ ಗಳಿಸಿದ, ಅನೇಕ ಶಿಕ್ಷಣ ಸಂಸ್ಥೆಗಳ ಒಡೆತನ ಹೊಂದಿರುವ ಸಚಿವ ಪರಮೇಶ್ವರ್ ಅವರು ಇದ್ದಕ್ಕಿದ್ದಂತೆ ಈ ಆಗ್ರಹ ಮಾಡಿರುವುದರ ಹಿಂದೆ ಈ ಸರ್ಕಾರದಲ್ಲಿ ಇರುವ ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ಕೈವಾಡ ಎದ್ದು ಕಾಣುತ್ತದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ರಾಮನ ಕಡು ವಿರೋಧಿಯಾಗಿದ್ದು ಅವರು ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಎಂದು ಘೋಷಿಸುವಲ್ಲಿ ಅವರಿಗೆ ಇದ್ದ ರಿಯಲ್ ಎಸ್ಟೇಟ್ ಹಿತಾಸಕ್ತಿಯೇ ಕಾರಣವಾಗಿತ್ತು ಎಂದರು.ತುಂಬೆ ಹೂವಿಗೆ ಪ್ರಸಿದ್ಧವಾಗಿದ್ದ ಕಲ್ಪತರು ನಾಡು ಎನಿಸಿರುವ ತುಮಕೂರು ಇಲ್ಲಿನ ಜಗತ್ಪ್ರಸಿದ್ದ ಸಿದ್ಧಗಂಗಾ ಮಠ, ಶಿವಗಂಗೆ ಬೆಟ್ಟ, ದೇವರಾಯನದುರ್ಗ, ಗೂಳೂರು ಮುಂತಾದ ಐತಿಹಾಸಿಕ ದೇವಾಲಯಗಳಿಂದ ಪ್ರಸಿದ್ಧವಾಗಿದೆ. ಇಂಥ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಕರೆದರೆ ಈ ಎಲ್ಲ ಚರಿತ್ರೆಯನ್ನು ಅಳಿಸಿ ಹೋಗುತ್ತದೆ, ಇತಿಹಾಸ ಮರೆಮಾಚಿದಂತಾಗುತ್ತದೆ. ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಿಸುವ ಮೂಲಕ ತುಮಕೂರಿನ ಪರಿಸರದ ಕೃಷಿ ಕ್ಷೇತ್ರಕ್ಕೆ ತೀವ್ರ ಏಟು ಬೀಳುತ್ತದೆ. ನಗರೀಕರಣ ಎಂದರೆ ಜನರನ್ನು ಗುಳೆ ಎಬ್ಬಿಸುವುದು ಮೊದಲ ಕೆಲಸ. ಅಲ್ಲಿ ಕಟ್ಟಡ, ಮಾಲ್ ಬಂದು ಕೃಷಿ ಯೋಗ್ಯ ಭೂಮಿ ನಾಶವಾಗುತ್ತದೆ. ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಈಗಾಗಲೇ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಅದನ್ನು ಒಂದನೇ ಸ್ಥಾನಕ್ಕೆ ಏರಿಸುವುದು ಇವರೆಲ್ಲರ ಉದ್ದೇಶವೇ ಎಂದು ಸುರೇಶ್‌ಗೌಡರು ಪ್ರಶ್ನಿಸಿದರು.ದಿಕ್ಕು ದೆಸೆಯಿಲ್ಲದ ಬೆಂಗಳೂರು ಈಗಾಗಲೇ ಸಂಚಾರ ದಟ್ಟಣೆ, ಗುಂಡಿ ತುಂಬಿದ ರಸ್ತೆಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ತೀವ್ರ ಕೊರತೆಯಿಂದ ನರಳುತ್ತಿದೆ. ಒಂದು ಕಾಲದಲ್ಲಿ ಪಿಂಚಣಿದಾರರ ಸ್ವರ್ಗ ಎನಿಸಿದ್ದ ಬೆಂಗಳೂರು ಈಗ ಕಾಂಕ್ರೀಟ್ ಕಾಡು ಎನಿಸಿದೆ. ಹೀಗಾಗಿ ತನ್ನ ಭಾರದಲ್ಲಿ ತಾನೇ ಕುಸಿಯುತ್ತಿರುವ ಬೆಂಗಳೂರಿಗೆ ದಕ್ಷಿಣದಲ್ಲಿ ರಾಮನಗರ ಮತ್ತು ಉತ್ತರದಲ್ಲಿ ತುಮಕೂರು ಸೇರಿಸಿ ಈ ಸರ್ಕಾರ ಏನು ಮಾಡಲು ಹೊರಟಿದೆ? ಇಂಥ ಪ್ರಕಟಣೆಗಳನ್ನು ಅಥವಾ ಆಗ್ರಹಗಳನ್ನು ದಿಢೀರ್ ಎಂದು ಮಾಡುವುದಕ್ಕಿಂತ ಮುಂಚೆ ಅದರ ಸಾಧಕ ಬಾಧಕಗಳನ್ನು ತಜ್ಞರ ಜತೆ ಚರ್ಚಿಸಬೇಕು. ತಮಗೆ ಪ್ರತಿಸ್ಪರ್ಧಿಯಾಗಿರುವ ಪರಮೇಶ್ವರ್ ಅವರನ್ನು ಸಂತುಷ್ಟಗೊಳಿಸಲು ಶಿವಕುಮಾರ್ ಅವರೇನಾದರೂ ಒಂದು ವೇಳೆ ಒಪ್ಪಿಕೊಂಡರೆ ನಮ್ಮ ತುಮಕೂರಿನ ಜನರ ಗತಿ ಅಧೋಗತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸುರೇಶ ಗೌಡರು ಎಚ್ಚರಿಸಿದರು.ಹಾಗೆಂದು ತುಮಕೂರು ಅಭಿವೃದ್ಧಿಯಾಗಬಾರದು ಎನ್ನುವುದು ನಮ್ಮ ನಿಲುವು ಅಲ್ಲ. ತುಮಕೂರಿಗೆ ಏನೇನು ಬರಬೇಕೋ ಅದೆಲ್ಲವೂ ಬರಬೇಕು. ಅದನ್ನು ಹೆಸರು ಬದಲಿಸಿ ತರುತ್ತೇವೆ ಎನ್ನುವುದು ಸರ್ಕಾರದ ಹೊಣೆಗೇಡಿ ತನಕ್ಕೆ ಸಾಕ್ಷಿಯಾಗಿದ್ದು ಕುಣಿಯಲು ಬಾರದವರು ನೆಲ ಡೊಂಕು ಎಂದಂತೆ ಎಂದು ಅವರು ವ್ಯಂಗ್ಯವಾಡಿದರು.