ಆರೋಪಿ ಭವಿತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಬಂಧಿಸಲು ತೆರಳಿದ ವೇಳೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದ, ಆಗ ಆತ್ಮರಕ್ಷಣೆ ಉದ್ದೇಶದಿಂದ ಸಬ್ ಇನ್ಸ್‌ಪೆಕ್ಟರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಆತನನ್ನು ಬಂಧಿಸಿರುವ ಘಟನೆ ಸೋಮವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಭವಿತ್ (26) ಬಂಧಿತ ರೌಡಿ ಶೀಟರ್. ಈತನ ವಿರುದ್ಧ ಕೊಲೆ, ದರೋಡೆ, ಕೊಲೆ ಯತ್ನ ಸೇರಿದಂತೆ 7 ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯಿಂದ ಈತನನ್ನು ಗಡಿಪಾರುಗೊಳಿಸಲಾಗಿತ್ತು. ಶಿವಮೊಗ್ಗಕ್ಕೆ ಆರೋಪಿ ವಾಪಾಸ್ ಆಗಿದ್ದ. ಭಾನುವಾರ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭವಿತ್ ಮತ್ತು ಇತರೆ ಇಬ್ಬರು ಸಾರ್ವಜನಿಕರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಬಂಧ ಆರೋಪಿ ಭವಿತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.ಸೋಮವಾರ ಖಚಿತ ಮಾಹಿತಿ ಮೇರೆ ವಿನೋಬನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಸುನೀಲ್ ನೇತೃತ್ವದ ತಂಡ ಆರೋಪಿ ಭವಿತ್‌ನನ್ನು ಬಂಧಿಸಲು ತೆರಳಿದ ವೇಳೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದ, ದಾಳಿಯಿಂದ ಸಿಬ್ಬಂದಿ ಶ್ರೀಕಾಂತ್ ಎಂಬುವರು ಗಾಯಗೊಂಡಿದ್ದಾರೆ. ತಕ್ಷಣವೇ ಆತ್ಮರಕ್ಷಣೆ ಉದ್ದೇಶದಿಂದ ಸಬ್ ಇನ್ಸ್‌ಪೆಕ್ಟರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡೇಟು ತಿಂದು ಗಾಯಗೊಂಡಿದ್ದ ರೌಡಿ ಶೀಟರ್ ಭವಿತ್ ಹಾಗೂ ಆತನಿಂದ ಹಲ್ಲೆಗೆ ಒಳಗಾಗಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಶ್ರೀಕಾಂತ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.