ಆಂಧ್ರದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ; ಸುಳಿವು ಕೊಟ್ಟಿದ್ದು ಮಂಡ್ಯ ಡಿಎಚ್‌ಒ

KannadaprabhaNewsNetwork |  
Published : Sep 26, 2025, 01:00 AM IST
೨೫ಕೆಎಂಎನ್‌ಡಿ-೧ಆಂಧ್ರ ಹೆಣ್ಣು ಭ್ರೂಣ ಹತ್ಯೆ ಗ್ಯಾಂಗ್ ಪತ್ತೆಗೆ ಸಹಕರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಡಾ. ಜಿ.ಸಿ.ಬೆಟ್ಟಸ್ವಾಮಿ, ಮಳವಳ್ಳಿ ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಹಾಕಿದ ಬಳಿಕ ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಾಗಿದೆ. ಹೊರರಾಜ್ಯದ ದಂಧೆಕೋರರು ರಾಜ್ಯದ ಗರ್ಭಿಣಿಯರನ್ನು ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿ ಭ್ರೂಣಹತ್ಯೆ ಮಾಡಿಸುವುದು ಕಬ್ಬು ಕಟಾವಿಗೆ ಬಂದಿದ್ದ ಗರ್ಭಿಣಿಯೊಬ್ಬರ ಮೂಲಕ ಬೆಳಕಿಗೆ ಬಂದಿದೆ.

 ಮಂಡ್ಯ :  ಡೆಕಾಯ್ ಆಪರೇಷನ್ ಮೂಲಕ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಇದೀಗ ಆಂಧ್ರದಲ್ಲಿ ಹೆಣ್ಣು ಭ್ರೂಣ ಹತ್ಯೆ ಯತ್ನ ಪ್ರಕರಣದ ಸುಳಿವು ನೀಡಿ ಅಲ್ಲಿನ ದಂಧೆಕೋರರ ಪತ್ತೆಗೆ ನೆರವಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಬ್ಬು ಕಡಿಯಲು ಬಳ್ಳಾರಿಯಿಂದ ಬಂದಿದ್ದ ಗರ್ಭಿಣಿ ಮಹಿಳೆಯೊಬ್ಬರ ಮೂಲಕವೇ ಡೆಕಾಯ್ ಆಪರೇಷನ್ ನಡೆಸಿದಾಗ ಹೆಣ್ಣು ಭ್ರೂಣ ಹತ್ಯೆ ನಡೆಸುವ ದಂಧೆಕೋರರ ಗ್ಯಾಂಗ್ ಪತ್ತೆಯಾಗಿದೆ.

ಅಷ್ಟಕ್ಕೂ ನಡೆದಿದ್ದೇನು?:

ಬಳ್ಳಾರಿ ಜಿಲ್ಲೆಯಿಂದ ಕಬ್ಬು ಕಟಾವು ಮಾಡುವವರ ತಂಡ ಮಂಡ್ಯ ಜಿಲ್ಲೆಯ ಅಲ್ಲಲ್ಲಿ ಬೀಡುಬಿಟ್ಟಿದೆ. ಅದೇ ರೀತಿ ಮಳವಳ್ಳಿ ತಾಲೂಕಿನ ಬಂಡೂರು ಸಮೀಪದ ದೇವಸ್ಥಾನದ ಬಳಿ ಕಬ್ಬು ಕಡಿಯುವ ತಂಡವೊಂದು ನೆಲೆಸಿತ್ತು. ಮಳವಳ್ಳಿ ತಾಲೂಕು ದುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ನಂದಿನಿ ಅವರು ಕಬ್ಬು ಕಟಾವಿಗೆ ಬಂದವರ ಆರೋಗ್ಯ ತಪಾಸಣೆ ನಡೆಸುವ ವೇಳೆ ಮಹಿಳೆಯೊಬ್ಬರು ಗರ್ಭಿಣಿಯಾಗಿರುವುದು ಪತ್ತೆಯಾಯಿತು.

ಆ ಮಹಿಳೆಗೆ ನಾಲ್ಕೂವರೆ ತಿಂಗಳಾಗಿದ್ದರಿಂದ ಮಗುವಿನ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸ್ಕ್ಯಾನಿಂಗ್ ಮಾಡಿಸುವಂತೆ ಆರೋಗ್ಯ ಸುರಕ್ಷಾ ಅಧಿಕಾರಿ ನಂದಿನಿ ಸಲಹೆ ನೀಡಿದ್ದರು. ಆ ವೇಳೆಗಾಗಲೇ ಆಕೆಗೆ ಮೂರು ಹೆಣ್ಣು ಮಕ್ಕಳಿದ್ದರು. ನಾಲ್ಕನೆಯ ಮಗು ಹೆಣ್ಣಾಗಿದ್ದು ಅದನ್ನೂ ಅಬಾರ್ಷನ್ ಮಾಡಿಸಿದ್ದರು. ಆನಂತರದ ನಾಲ್ಕು ವರ್ಷದ ಬಳಿಕ ಆಕೆ ಮತ್ತೆ ಗರ್ಭಿಣಿಯಾಗಿದ್ದಳು.

ಆಂಧ್ರದಲ್ಲಿ ಸ್ಕ್ಯಾನಿಂಗ್‌:

ಸ್ಕ್ಯಾನಿಂಗ್ ಮಾಡಿಸುವಂತೆ ಸಲಹೆ ನೀಡಿ ಬಂದ ನಂತರ ಆಕೆ ವಾಪಸ್ ಬಳ್ಳಾರಿಗೆ ತೆರಳಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಕುಡಮೂರಿನ ಬಾಷಾ ನರ್ಸಿಂಗ್ ಹೋಂನಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಹೆಣ್ಣು ಶಿಶು ಎಂಬುದು ಗೊತ್ತಾಗಿದೆ. ನಂತರ ಆಕೆ ಹಣಕಾಸನ್ನು ಹೊಂದಿಸಿಕೊಳ್ಳಲು ಅಲ್ಲಿಂದ ಬಳ್ಳಾರಿಗೆ ಬಂದು ನಂತರ ಮಳವಳ್ಳಿಯ ಬಂಡೂರಿಗೆ ಬಂದಿದ್ದಳು. ಸ್ಕ್ಯಾನಿಂಗ್ ಮಾಡಿಸಲು ಹೇಳಿ ಒಂದು ವಾರವಾದರೂ ಬಾರದ ಗರ್ಭಿಣಿಯ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆರೋಗ್ಯ ಸುರಕ್ಷಾ ಅಧಿಕಾರಿ ನಂದಿನಿ ಈ ವಿಷಯವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ಅವರಿಗೆ ತಿಳಿಸಿದಾಗ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಸಿ.ಬೆಟ್ಟಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ.

ತುಂಬಾ ಸಾಲ ಇದೆ:

ಡಾ. ಜಿ.ಸಿ.ಬೆಟ್ಟಸ್ವಾಮಿ ಅವರೊಂದಿಗೆ ಡಾ.ವೀರಭದ್ರಪ್ಪ ಸೇರಿದಂತೆ ಸಿಬ್ಬಂದಿ ಆ ಗರ್ಭಿಣಿಯನ್ನು ಭೇಟಿಯಾಗಿ ಸ್ಕ್ಯಾನಿಂಗ್ ಮಾಡಿಸಲು ಏಕೆ ಬರಲಿಲ್ಲವೆಂದು ವಿಚಾರಿಸಿದಾಗ, ನಮಗೆ ಈಗಾಗಲೇ ಮೂರು ಹೆಣ್ಣು ಮಕ್ಕಳಿವೆ. ನಾಲ್ಕನೆಯದು ಹೆಣ್ಣಾಗಿದ್ದು ಅಬಾರ್ಷನ್ ಆಗಿತ್ತು. ಈಗ ಮತ್ತೆ ಹೆಣ್ಣು ಮಗುವಿರುವುದು ಗೊತ್ತಾಗಿದೆ. ನಮಗೆ ತುಂಬಾ ಸಾಲವಿದೆ. ಮಕ್ಕಳನ್ನು ಸಾಕುವುದು ಕಷ್ಟ ಎಂದು ಹೇಳಿಕೊಂಡಿದ್ದಾಳೆ.

ಆ ಸಮಯದಲ್ಲಿ ಎಲ್ಲಿ ಸ್ಕ್ಯಾನಿಂಗ್ ಮಾಡಿಸಿದೆ, ಹೆಣ್ಣು ಮಗು ಇರುವ ವಿಷಯವನ್ನು ಹೇಳಿದವರು ಯಾರು ಎಂದಾಗ, ಆರಂಭದಲ್ಲಿ ನಿಜಾಂಶ ಬಾಯಿಬಿಡಲು ಹಿಂದೇಟು ಹಾಕಿದಳು. ಇದಕ್ಕೆ ಆಕೆಯ ಪತಿಯೂ ಸೇರಿಕೊಂಡನು. ಆಗ ಹೆಣ್ಣು ಭ್ರೂಣ ಹತ್ಯೆಯ ಸುಳಿವು ನೀಡಿದವರಿಗೆ ನೀಡುವ ೧ ಲಕ್ಷ ರು. ಬಹುಮಾನವನ್ನು ಅವರಿಗೇ ನೀಡುವುದಾಗಿ ಹೇಳಿ ಅವರಿಂದ ಸ್ಕ್ಯಾನಿಂಗ್ ಮಾಡಿಸಿದವರ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಡಾ.ಬೆಟ್ಟಸ್ವಾಮಿ ಅವರಿಗೆ ತಿಳಿಸಿದರು.

ಬಹುಮಾನ ಹಣಕ್ಕೆ ಒಪ್ಪಿದರು:

ಅದರಂತೆ ಬಹುಮಾನದ ಹಣ ನೀಡುವುದಾಗಿ ಹೇಳಿದಾಗ ಸ್ಕ್ಯಾನಿಂಗ್ ಮಾಡಿಸಿದ ಜಾಗ ತೋರಿಸುವುದಕ್ಕೆ ಒಪ್ಪಿಕೊಂಡರು. ಅದು ಆಂಧ್ರ ಕರ್ನೂಲ್ ಜಿಲ್ಲೆಯ ಕುಡಮೂರು ಎಂಬ ವಿಷಯ ತಿಳಿದಾಗ ಡಾ.ಕೆ.ಮೋಹನ್ ಅವರು ರಾಜ್ಯ ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಿದರು. ರಾಜ್ಯ ಅಧಿಕಾರಿಗಳ ಜೊತೆ ಮಾಡಿ ಡೆಕಾಯ್ ತಂತ್ರಗಾರಿಕೆ ಬಳಸಿ ಗರ್ಭಿಣಿ ಮತ್ತು ಆಕೆಯ ಪತಿಗೆ ಕಾರು ಮಾಡಿಸಿ ಕಳುಹಿಸಿಕೊಡಲಾಯಿತು. ಡಾ.ಕೆ.ಮೋಹನ್ ಮಾಡಿದ ತಂತ್ರಗಾರಿಕೆಯಂತೆ ಸ್ಕ್ಯಾನಿಂಗ್ ಮಾಡಿದ ಜಾಗ ಕುಡಮೂರಿನ ಬಾಷಾ ನರ್ಸಿಂಗ್ ಹೋಂ ಆಗಿತ್ತು. ಅಲ್ಲಿಗೆ ಹೋಗಿ ನರ್ಸಿಂಗ್ ಹೋಂನ್ನು ರಾಜ್ಯ ಆರೋಗ್ಯ ಅಧಿಕಾರಿಗಳು ಬಂದ್ ಮಾಡಿಸಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಡಾ.ಕೆ.ಮೋಹನ್ ಸುವರ್ಣನ್ಯೂಸ್- ಕನ್ನಡಪ್ರಭ ಡಾಕ್ಟರ್ ಅವಾರ್ಡ್ ಪುರಸ್ಕೃತರು

ಹೆಣ್ಣು ಭ್ರೂಣ ಹತ್ಯೆ ದಂಧೆಕೋರರ ಪತ್ತೆಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಡೆಕಾಯ್ ಆಪರೇಷನ್ ತಂತ್ರಗಾರಿಕೆ ಮೂಲಕ ಯಶಸ್ಸು ಕಂಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ೨೦೨೪ನೇ ಸಾಲಿನ ಸುವರ್ಣನ್ಯೂಸ್- ಕನ್ನಡಪ್ರಭ ಡಾಕ್ಟರ್ ಅವಾರ್ಡ್ ಪುರಸ್ಕೃತರಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಿದ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಇದೀಗ ಹೊರರಾಜ್ಯದ ಹೆಣ್ಣು ಭ್ರೂಣ ಹತ್ಯೆ ದಂಧೆಕೋರರನ್ನೂ ಪತ್ತೆ ಮಾಡುವಲ್ಲಿ ನೆರವಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಹಾಕಿದ ಬಳಿಕ ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಾಗಿದೆ. ಹೊರರಾಜ್ಯದ ದಂಧೆಕೋರರು ರಾಜ್ಯದ ಗರ್ಭಿಣಿಯರನ್ನು ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿ ಭ್ರೂಣಹತ್ಯೆ ಮಾಡಿಸುವುದು ಕಬ್ಬು ಕಟಾವಿಗೆ ಬಂದಿದ್ದ ಗರ್ಭಿಣಿಯೊಬ್ಬರ ಮೂಲಕ ಬೆಳಕಿಗೆ ಬಂದಿದೆ. ಆ ಗ್ಯಾಂಗ್‌ನ ಜಾಲವನ್ನು ಬೇಧಿಸಿದ್ದು ನಾವೇ. ಡೆಕಾಯ್ ತಂತ್ರಗಾರಿಕೆಯೊಂದಿಗೆ ಗರ್ಭಿಣಿಯನ್ನು ರಾಜ್ಯ ಆರೋಗ್ಯ ಅಧಿಕಾರಿಗಳ ಜೊತೆ ಮಾಡಿ ಕಳುಹಿಸಿದೆವು. ಅಲ್ಲಿ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಕಬ್ಬು ಕಟಾವಿಗೆ ಬಂದಿರುವವರಲ್ಲಿ ಇನ್ನೂ ಮೂರ್ಕಾಲ್ಕು ಗರ್ಭಿಣಿಯರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯುವ ಪ್ರಯತ್ನಗಳು ನಡೆದಿದ್ದು, ಅವರ ಮೇಲೂ ನಿಗಾ ವಹಿಸಲಾಗಿದೆ. ಸ್ಕ್ಯಾನಿಂಗ್ ಮಾಡಿದ ಮಹಿಳೆಗೆ ಗರ್ಭಪಾತವಾಗಿಲ್ಲ. ಗರ್ಭಿಣಿಯ ವಿವರವನ್ನು ಬಳ್ಳಾರಿ ಆರೋಗ್ಯಾಧಿಕಾರಿಗಳಿಗೆ ನೀಡಿ ನಿಗಾ ವಹಿಸಲಾಗಿದೆ. ೧ ಲಕ್ಷ ರು. ಬಹುಮಾನದ ಹಣವನ್ನು ಆಕೆಗೆ ನೀಡಲಾಗುವುದು.

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ

ಸ್ಕ್ಯಾನಿಂಗ್ ಮಾಡಿದವರ ಬಗ್ಗೆ ಆರಂಭದಲ್ಲಿ ಗರ್ಭಿಣಿ ಹೆಂಗಸು ಬಾಯಿಬಿಡಲಿಲ್ಲ. ಅವರಿಗೆ ಸಾಲವಿದ್ದ ಕಾರಣ ೧ ಲಕ್ಷ ರು. ಬಹುಮಾನದ ಹಣವನ್ನು ನೀಡುವುದಾಗಿ ಹೇಳಿದ ಮೇಲೆ ಒಪ್ಪಿಕೊಂಡರು. ಅದರಂತೆ ಕಾರ್ಯಾಚರಣೆ ನಡೆಸಿದಾಗ ಆಂಧ್ರಪ್ರದೇಶದಲ್ಲಿ ಹೆಣ್ಣು ಭ್ರೂಣಹತ್ಯೆ ನಡೆಸುತ್ತಿದ್ದ ಗ್ಯಾಂಗ್ ಪತ್ತೆಯಾಗಿದೆ.

- ಡಾ.ಜಿ.ಸಿ.ಬೆಟ್ಟಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಮಂಡ್ಯ 

PREV
Read more Articles on

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ