ಸಂಡೂರು: ಪ್ರೀತಿಸಿದ್ದ ಯುವತಿ ತನ್ನ ಪ್ರೀತಿಯನ್ನು ಮುಂದುವರಿಸಲು ಒಪ್ಪದ್ದರಿಂದ ಕೋಪಗೊಂಡ ಪ್ರೇಮಿ ಶುಕ್ರವಾರ ಮಧ್ಯಾಹ್ನ ಯುವತಿಯ ಮನೆಗೆ ಆಗಮಿಸಿ, ಯುವತಿ, ಯುವತಿಯ ತಾಯಿ ಹಾಗೂ ಸಹೋದರನ ಮೇಲೆ ಮಚ್ಚಿನಿಂದ ಹಲ್ಲೆಮಾಡಿ, ಕೊಲೆಗೆ ಯತ್ನಿಸಿದ ಘಟನೆ ಪಟ್ಟಣದ ಶಿಕ್ಷಕರ ಕಾಲನಿಯಲ್ಲಿ ನಡೆದಿದೆ.
ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ ನವೀನ್‌ಕುಮಾರ್ ಹಾಗೂ ಹಲ್ಲೆಗೊಳಗಾದ ಕೀರ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಕೀರ್ತಿ ಆತನಿಂದ ದೂರ ಇದ್ದರು. ಇದರಿಂದ ಕೋಪಗೊಂಡ ನವೀನ್‌ಕುಮಾರ್ ಶುಕ್ರವಾರ ಕೀರ್ತಿ ಹಾಗೂ ಅವರ ತಾಯಿ ಮತ್ತು ಅಣ್ಣನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ನಂತರ ಕಾರಿನಲ್ಲಿ ಸಾಗಿ, ಯಶವಂತನಗರದ ಗಂಡಿ ಮಲಿಯಮ್ಮ ದೇವಸ್ಥಾನದ ಬಳಿ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೆ ಬಳಸಿದ್ದು ಎನ್ನಲಾದ ಮಚ್ಚು ಮನೆಯ ಬಳಿಯಲ್ಲಿ ಬಿದ್ದಿದೆ. ಪೊಲೀಸರು ಹಲ್ಲೆ ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.