ಹುಬ್ಬಳ್ಳಿ/ಧಾರವಾಡ: ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನ, ನಾಲ್ವರ ಬಂಧನ

KannadaprabhaNewsNetwork |  
Published : Jan 31, 2025, 12:48 AM ISTUpdated : Jan 31, 2025, 12:53 PM IST
454 | Kannada Prabha

ಸಾರಾಂಶ

ಕಂತು ಕಟ್ಟುವುದು ವಿಳಂಬವಾದ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಮಾನಸಿಕ, ದೈಹಿಕ ಕಿರುಕುಳ ಕೊಟ್ಟಿದ್ದರು. ಇವರ ಪತ್ನಿಯನ್ನು ಸಾರ್ವಜನಿಕವಾಗಿ ಎಳೆದಾಡಿದ್ದಾರೆ. ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾರೆ.

ಹುಬ್ಬಳ್ಳಿ/ಧಾರವಾಡ:  ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ವ್ಯಕ್ತಿಯೊಬ್ಬರು ಬುಧವಾರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಇಲ್ಲಿನ ಕಮರಿಪೇಟೆಯ ನಿವಾಸಿ ಮೆಹಬೂಬಅಲಿ ಬಕಾಲ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಫರ್ನಿಚರ್ ವ್ಯವಹಾರಕ್ಕಾಗಿ ನವನಗರದ ಶ್ರೀಫಿನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ₹1.10 ಲಕ್ಷ, ಬಿಡ್ನಾಳದ ಕ್ರೆಡಿಟ್ ಅಕ್ಸೆಸ್ ಗ್ರಾಮೀಣ ಲಿಮಿಟೆಡ್‌ನಲ್ಲಿ ₹ 1.48 ಲಕ್ಷ, ಉಣಕಲ್ಲಿನ ಇಕ್ವಿಟಾಸ್ ಫೈನಾನ್ಸ್‌ ಕಂಪನಿಯಲ್ಲಿ ₹ 1.10 ಲಕ್ಷ ಸಾಲ ಮಾಡಿದ್ದರು.

ಪ್ರತಿವಾರ ಸಾಲ ಕಟ್ಟುವ ಒಪ್ಪಂದ ಮಾಡಿಕೊಂಡಿದ್ದರು. ಕಂತು ಕಟ್ಟುವುದು ವಿಳಂಬವಾದ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಮಾನಸಿಕ, ದೈಹಿಕ ಕಿರುಕುಳ ಕೊಟ್ಟಿದ್ದರು. ಇವರ ಪತ್ನಿಯನ್ನು ಸಾರ್ವಜನಿಕವಾಗಿ ಎಳೆದಾಡಿದ್ದಾರೆ. ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದು ಮೆಹಬೂಬ ಅಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಕೆಎಂಸಿಆರ್‌ಐಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ನಾಲ್ವರ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಫೈನಾನ್ಸ್‌ನ ವಿನೋದ, ಸುಜೇತ್, ರವಿ, ಸುನೀಲ್ ಎಂಬುವವರನ್ನು ಸದ್ಯ ಬಂಧಿಸಲಾಗಿದೆ. ಮೆಹಬೂಬ್‌ನ ಆರೋಗ್ಯ ಚೇತರಿಸಿಕೊಂಡಿದೆ. ಹಾಗೆಯೇ ನಗರದಲ್ಲಿ ವಾಹನ, ಮನೆ, ವಸ್ತು, ಆಸ್ತಿಗಳನ್ನು ಸೇಲ್‌ಡೀಡ್ ಮೂಲಕ ಬರೆಯಿಸಿಕೊಂಡು ಬಡ್ಡಿ ಸಾಲ ನೀಡುತ್ತಿರುವವರ ಬಗ್ಗೆಯೂ ಮಾಹಿತಿ ಬರುತ್ತಿವೆ. ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಬಡ್ಡಿದಂಧೆ ನಡೆಸುತ್ತಿರುವರು, ಸಾಲ ಕೊಟ್ಟವರಿಗೆ ಕಿರುಕುಳ ನಿಲ್ಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಿ ಎಂದು ಆಯುಕ್ತರು ಫೈನಾನ್ಸ್‌ನವರಿಗೆ ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!