ಗ್ರಾಪಂ ಕೆಡಿಪಿ ಸಭೆಗೆ ಹಾಜರಾಗಿ ವರದಿ ಮಂಡಿಸಿ: ಅಧಿಕಾರಿಗಳಿಗೆ ಶಾಸಕ ಎಚ್.ಟಿ.ಮಂಜು ಸೂಚನೆ

KannadaprabhaNewsNetwork |  
Published : May 29, 2025, 01:59 AM IST
28ಕೆಎಂಎನ್ ಡಿ21 | Kannada Prabha

ಸಾರಾಂಶ

ಶಾಸನ ಸಭೆಗೆ ಎಷ್ಟು ಗೌರವ ಇದೆಯೋ , ಗ್ರಾಪಂಗಳು ನಡೆಸುವ ಕೆಡಿಪಿ ಸಭೆಗೂ ಅಷ್ಟೇ ಗೌರವ ಇರುತ್ತದೆ. ಹಾಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳು, ಸಹಕಾರ ಸಂಸ್ಥೆಗಳು, ಸರ್ಕಾರಿ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು ಸಹ ಕೆಡಿಪಿ ಸಭೆಗೆ ಬಂದು ತಮ್ಮ ಸಂಸ್ಥೆ ಪ್ರಗತಿ ಬಗ್ಗೆ ವರದಿ ಮಂಡಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿಗಳು ನಡೆಸುವ ಕೆಡಿಪಿ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಾಗಿ ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಮಂಡಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಎಚ್ಚರಿಸಿದರು.

ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯನ್ನು ಉದ್ಘಾಟಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳು ಚುನಾಯಿತ ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸರ್ಕಾರಗಳಾಗಿವೆ. ಕೆಲವು ಇಲಾಖೆಗಳು ಗ್ರಾಪಂನ ಕೆಡಿಪಿ ಸಭೆಗೆ ಹಾಜರಾಗದೇ ಇರುವುದು ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ಮರುಕಳಿಸಿದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಸನ ಸಭೆಗೆ ಎಷ್ಟು ಗೌರವ ಇದೆಯೋ , ಗ್ರಾಪಂಗಳು ನಡೆಸುವ ಕೆಡಿಪಿ ಸಭೆಗೂ ಅಷ್ಟೇ ಗೌರವ ಇರುತ್ತದೆ. ಹಾಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳು, ಸಹಕಾರ ಸಂಸ್ಥೆಗಳು, ಸರ್ಕಾರಿ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು ಸಹ ಕೆಡಿಪಿ ಸಭೆಗೆ ಬಂದು ತಮ್ಮ ಸಂಸ್ಥೆ ಪ್ರಗತಿ ಬಗ್ಗೆ ವರದಿ ಮಂಡಿಸಬೇಕು ಎಂದರು.

ಡೈರಿಗಳು, ಸೊಸೈಟಿ ಸಂಘಗಳ ಕಾರ್ಯದರ್ಶಿಗಳು ಸಭೆಗೆ ಬಾರದೇ ಇರುವುದು ಸರಿಯಲ್ಲ. ತಾಲೂಕು ಮಟ್ಟದಲ್ಲಿ ನಡೆಯುವ ಶಾಸಕರ ನೇತೃತ್ವದ ಸಭೆಗೆ ಆಹ್ವಾನದ ನೋಟಿಸ್ ನೀಡಿದ್ದರೂ ಬಾರದೇ ಇರುವ ಡೈರಿ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಪಿಡಿಒಗೆ ಸೂಚನೆ ನೀಡಿದರು. ಕೆಡಿಪಿ ಸಭೆಗೆ ಕಡ್ಡಾಯವಾಗಿ ಡೈರಿಗಳ ಕಾರ್ಯದರ್ಶಿಗಳು, ಸೊಸೈಟಿಗಳ ಸಿಇಒಗಳು ಭಾಗವಹಿಸಿ ಪ್ರಗತಿ ಕುರಿತು ಸಭೆಯಲ್ಲಿ ಮಂಡಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಅರಣ್ಯ ಇಲಾಖೆ ತಾಲೂಕು ಅಧಿಕಾರಿ ಅನಿತಾ, ಕೃಷಿ ಇಲಾಖೆ ಅಧಿಕಾರಿ ಶ್ರೀಧರ್, ಚೆಸ್ಕಾಂ ಇಂಜಿನಿಯರ್ ಸುನಿಲ್‌ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಸುನಿಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ವರದಿ ಮಂಡಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಎ.ಸಿ.ದಿವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಕೆ.ಸುಷ್ಮಾ, ತಾಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ಗ್ರಾಪಂ ಉಪಾಧ್ಯಕ್ಷೆ ಸುನೀತಾ ದ್ಯಾವಯ್ಯ, ಪಿಡಿಒ ಶಿಲ್ಪಾ ಸೇರಿದಂತೆ ಗ್ರಾಪಂ ಸದಸ್ಯರು, ಕಾರ್ಯದರ್ಶಿ ಸೇರಿದಂತೆ ಹಲವರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್