ಸಾಹಿತ್ಯ ಗ್ರಾಮ ಯೋಜನೆಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಿ

KannadaprabhaNewsNetwork |  
Published : May 29, 2025, 01:57 AM IST
ಪೊಟೊ: 28ಎಸ್‌ಎಂಜಿಕೆಪಿ02ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರೂಪಿಸಿರುವ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಸ್ಮಾರಕ ಗ್ರಂಥಾಲಯವನ್ನು ಬುಧವಾರ ಸಚಿವ ಮಧು ಬಂಗಾರಪ್ಪ ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ಶಿವಮೊಗ್ಗ: ಸಾಹಿತ್ಯಾತ್ಮಕ ಬರವಣಿಗೆ, ಅಧ್ಯಯನದಂತಹ ಕ್ರಿಯಾಶೀಲತೆಯ ಸಂಗಮವಾದ ಸಾಹಿತ್ಯ ಗ್ರಾಮ ಯೋಜನೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಸಾಹಿತ್ಯಾತ್ಮಕ ಬರವಣಿಗೆ, ಅಧ್ಯಯನದಂತಹ ಕ್ರಿಯಾಶೀಲತೆಯ ಸಂಗಮವಾದ ಸಾಹಿತ್ಯ ಗ್ರಾಮ ಯೋಜನೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಬುಧವಾರ ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರೂಪಿಸಿರುವ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಸ್ಮಾರಕ ಗ್ರಂಥಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬಂಗಾರಪ್ಪ ಅವರ ಹೆಸರಿನಲ್ಲಿ ಸಾಹಿತ್ಯ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಗ್ರಂಥಾಲಯದ ಮೂಲಕ, ಕನ್ನಡ ಸಾಹಿತ್ಯ ಪರಿಷತ್ತು ಬಂಗಾರಪ್ಪ ಅವರಿಗೆ ದೊಡ್ಡ ಗೌರವ ನೀಡಿದೆ. ಸಾಹಿತ್ಯ ಗ್ರಾಮ ಯೋಜನೆಯು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಿ. ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಾಜದ ಉನ್ನತಿಯ ಕುರಿತಾಗಿ ಚರ್ಚಿಸುವ ಚಿಂತಕರ ಚಾವಡಿಯಾಗಿ ರೂಪಗೊಳ್ಳಲಿ. ಅಂತಹ ಸೃಜನಶೀಲ ಚಿಂತನೆಗಳ ಮೂಲಕ ಯುವ ಸಮೂಹಕ್ಕೆ ಸಾಹಿತ್ಯ ಬರವಣಿಗೆಯ ಮಾರ್ಗದರ್ಶನದ ಕೇಂದ್ರವಾಗಿ, ಪ್ರೇರಣೀಯ ವೇದಿಕೆಯಾಗಲಿ ಎಂದು ಆಶಿಸಿದರು.

ಕರ್ನಾಟಕ ಸರ್ಕಾರ ಸಾಹಿತಿಗಳಿಗೆ ಹೆಚ್ಚು ಬಲ ತುಂಬುವ ಕೆಲಸ ಮಾಡುತ್ತಿದೆ. ಸೃಜನಶೀಲ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚು ಪೂರಕ ವಾತಾವರಣ ನಿರ್ಮಾಣ ಮಾಡುವತ್ತ ಕಾಳಜಿ ತೋರುತ್ತಿದೆ. ಈಚೆಗೆ ಸರ್ಕಾರದಿಂದ ಏರ್ಪಡಿಸಿದ್ದ ಗಾಂಧಿ ಭಾರತ ಕಾರ್ಯಕ್ರಮದ ಮೂಲಕ ಮುಂದಿನ ಪೀಳಿಗೆಗೆ ಗಾಂಧೀಜಿಯವರ ಆದರ್ಶ ಕಾರ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿದ್ದೇವೆ ಎಂದರು.ಜಿಲ್ಲೆಯಲ್ಲಿ ರೂಪಗೊಳ್ಳುವ ಯಾವುದೇ ಸಾಹಿತ್ಯಾತ್ಮಕ ಯೋಜನೆಗಳಿಗೆ ನಮ್ಮ ಅಸ್ಮಿತೆಯಾದ ಕುವೆಂಪು ಅವರ ಹೆಸರಿನೊಂದಿಗೆ ಪ್ರಾರಂಭಗೊಳ್ಳುವಂತಿರಲಿ. ಸಾಹಿತ್ಯ ಗ್ರಾಮಕ್ಕೆ ಕುವೆಂಪು ಸಾಹಿತ್ಯ ಗ್ರಾಮ ಎಂಬ ಹೆಸರಿದ್ದರೆ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಗ್ರಾಮವನ್ನು ಸರ್ಕಾರ ಮತ್ತು ನಾವೆಲ್ಲರೂ ಕೂಡಿ ಮತ್ತಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸಾಹಿತ್ಯ ಗ್ರಾಮ ರಾಜ್ಯದಲ್ಲಿರುವ ಅಪರೂಪದ ಯೋಜನೆ. ಒಂದು ಕಾಲು ಎಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆಗೆ ಸರ್ಕಾರದಿಂದ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಧು ಬಂಗಾರಪ್ಪ ಅವರು ನೀಡಿದ ೫ ಲಕ್ಷ ರುಪಾಯಿ ಆರ್ಥಿಕ ಸಹಕಾರ ಮತ್ತು ಆಶಯದಂತೆ ಬಂಗಾರಪ್ಪ ಅವರ ಹೆಸರಿನಲ್ಲಿ ಗ್ರಂಥಾಲಯ ಪ್ರಾರಂಭಿಸಲಾಗಿದೆ. ಇದರಿಂದ ಸಂಶೋಧನಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈಗಾಗಲೇ ಗ್ರಂಥಾಲಯದಲ್ಲಿ ಸುಮಾರು ಒಂದುವರೆ ಸಾವಿರದಷ್ಟು ಅಮೂಲ್ಯವಾದ ಸಾಹಿತ್ಯ ಕೃತಿಗಳು ಇವೆ. ಹಿರಿಯ ಸಾಹಿತಿಗಳ ಕೃತಿಗಳ ಪ್ರತಿಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಪ್ರಕಟಣೆಗಳನ್ನು ಸಹ ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಸಾಹಿತಿ ಪ್ರೊ.ವಿಜಯಾದೇವಿ, ಕಸಾಪ ಪದಾಧಿಕಾರಿಗಳಾದ ಎಂ.ಎಂ.ಸ್ವಾಮಿ, ಎಂ.ನವೀನ್ ಕುಮಾರ್, ಡಿ.ಗಣೇಶ್, ಮಂಜಪ್ಪ, ಹುಚ್ಚರಾಯಪ್ಪ, ಕೃಷ್ಣಮೂರ್ತಿ ಹಿಳ್ಳೋಡಿ, ತಾಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ರಘು ಮತ್ತಿತರರಿದ್ದರು.

ಡಾ.ರಾಜ್‌ಕುಮಾರ್ ಪುಸ್ತಕ

ಮೆಲುಕು ಹಾಕಿದ ಸಚಿವರುಗ್ರಂಥಾಲಯದಲ್ಲಿ ಸಂಗ್ರಹಿಸಿದ್ದ ನಟ ಸಾರ್ವಭೌಮ ಡಾ.ರಾಜಕುಮಾರ್ ಅವರ ಜೀವನ ಚರಿತ್ರೆ ಪುಸ್ತಕದತ್ತ ಚಿತ್ತ ಹರಿಸಿದ ಸಚಿವ ಮಧು ಬಂಗಾರಪ್ಪ, ಪುಸ್ತಕ ಕೈಗೆತ್ತಿಕೊಂಡು ಪ್ರತಿಗಳನ್ನು ಮೆಲುಕು ಹಾಕುತ್ತ, ಪುಸ್ತಕ ನಿರ್ಮಾಣ ಕಾರ್ಯದಲ್ಲಿ ತಾವು, ಶಿವರಾಜ್‌ಕುಮಾರ್, ಪುನಿತ್ ರಾಜಕುಮಾರ್ ಅವರು ತೊಡಗಿಸಿಕೊಂಡ ಸಂದರ್ಭ ನೆನೆದರು. ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಬರೆದಿರುವ ಈ ಪುಸ್ತಕವು, ಡಾ.ರಾಜ್‌ಕುಮಾರ್ ಕುರಿತಾಗಿ ಉನ್ನತ ಅಧ್ಯಯನ ನಡೆಸಲು ನೆರವಾಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ