ಕನ್ನಡಪ್ರಭ ವಾರ್ತೆ ನಂಜನಗೂಡು
ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಕೃಷಿ ವಿಚಾರ ಸಂಕೀರ್ಣದ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿಕರೇ ರಾಷ್ಟ್ರದ ಬೆನ್ನೆಲುಬು, ಜಗತ್ತಿನ ನಾಗರೀಕತೆಗೆ ಮೊದಲು ಹತ್ತಿ ಬೆಳೆಯನ್ನು ಪರಿಚಯಿಸಿದ್ದು, ಭಾರತ ದೇಶ. ಯಾವುದೇ ರಾಷ್ಟ್ರದ ಶಕ್ತಿಯನ್ನು ಕೃಷಿಯಿಂದ ಅಳೆಯಬಹುದಾಗಿದೆ. 2008ರಲ್ಲಿ ಆರ್ಥಿಕ ಕುಸಿತ ಉಂಟಾದಾಗ ಜಗತ್ತಿನ ಎಲ್ಲ ರಾಷ್ಟ್ರಗಳ ಆರ್ಥಿಕತೆ ಬುಡಮೇಲಾದರೂ ಸಹ ರೈತರ ಶ್ರಮದಿಂದ ಭಾರತ ದೇಶ ಅಂತಹ ಅಘಾತವನ್ನು ಸಹಿಸಿಕೊಂಡು ತಲೆ ಎತ್ತಿ ನಿಲ್ಲಲು ಕಾರಣವಾಗಿದೆ. ಆದ್ದರಿಂದ ರೈತರಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮಗಳನ್ನು ಸರ್ಕಾರಗಳು ರೂಪಿಸಬೇಕಿದೆ ಎಂದರು.ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಮಾತನಾಡಿ, ಕೃಷಿ ಅನುತ್ಪಾದಕ ವಲಯ ಎಂದು ಗ್ರಾಮವನ್ನು ತೊರೆದು ವಲಸೆ ಹೋಗುತ್ತಿರುವ ಸಂಧರ್ಭದಲ್ಲಿ ಸುತ್ತೂರು ಮಠ ಜಾತ್ರಾ ಮಹೋತ್ಸವದ ಮೂಲಕ ರೈತರ ಬದುಕಿಗೆ ಹೊಸ ಆಯಾಮವನ್ನುಕೊಡುವ ಪ್ರಯತ್ನವನ್ನು ನಡೆಸಿದೆ. ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರ ಸಮಾಜದ ಆಧಾರ ಸ್ಥಂಬಗಳು ಅದಕ್ಕೆ ಬಲ ತುಂಬುವ ಕೆಲಸವನ್ನು ಧಾರ್ಮಿಕ ಸಂಸ್ಥೆಗಳು, ಮಠ ಮಾನ್ಯಗಳು ಮಾಡುತ್ತಿವೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಯಾವ ಸರ್ಕಾರಗಳಿಗೂ ಸಹ ರೈತಪರ ಕಾಳಜಿಯಿಲ್ಲ, ಯಾವ ಸರ್ಕಾರಗಳೂ ರೈತರ ಆತ್ಮಹತ್ಯೆ ತಡೆಯುವ ಪ್ರಯತ್ನವನ್ನೂ ಮಾಡಿಲ್ಲ, ರೈತರಿಗೆ ನಿಸರ್ಗ ಒಂದು ರೀತಿ ತೊಂದರೆಕೊಟ್ಟರೆ ಸರ್ಕಾರಗಳೂ ಸಹ ಒಂದು ರೀತಿ ತೊಂದರೆ ಕೊಡುವ ಮೂಲಕ ರೈತರ ಬೆನ್ನೆಲುಬನ್ನೇ ಮುರಿಯುವಂತಹ ಕೆಲಸವನ್ನು ಮಾಡುತ್ತಿವೆ. ಕೃಷಿ ಸಚಿವರಿಗೆ ಸ್ವತಂತ್ರವಾಗಿ ಯೋಚಿಸುವ ಸ್ವಾತಂತ್ರ್ಯವನ್ನು ಸರ್ಕಾರ ನೀಡುತ್ತಿಲ್ಲ ಐಎಎಸ್ ಅಧಿಕಾರಿಗಳ ಸೂಚನೆಯಂತೆ ಕಾರ್ಯಕ್ರಮ ರೂಪಿಸುವ ಮೂಲಕ ಪುಸ್ತಕ ನೋಡಿ ಅಡುಗೆ ಮಾಡುವಂತಹ ಸ್ಥಿತಿಗೆ ರೈತರನ್ನು ನಿಲ್ಲಿಸಿದೆ. ನಾನು ಸ್ವತಃ ಪ್ರಗತಿಪರ ರೈತನಾಗಿದ್ದರೂ ಸಹ ಕೃಷಿಯಲ್ಲಿ ಲಾಭಗಳಿಸಲು ಸಧ್ಯವಾಗುತ್ತಿಲ್ಲ ನನ್ನಂತಹವರಿಗೇ ಇಂತಹ ಸ್ಥಿತಿಯಾದರೆ ಬಡ ರೈತರ ಪಾಡೇನು? ಒಂದು ವೇಳೆ ರೈತ ಸಂಕುಲ ನಶಿಸಿ ಹೋದರೆ ದೇಶಕ್ಕೆ ಆಹಾರ ಕೊರತೆ ಕಾಡದೆ ಇರದು. ಸರ್ಕಾರ ಉಚಿತ ಯೋಜನೆಗಳನ್ನು ನೀಡುತ್ತಿರುವ ಕಾರಣ ಕೃಷಿ ಕೆಲಸಕ್ಕೆ ಕೆಲಸಗಾರರು ಸಿಗುತ್ತಿಲ್ಲ, ರೈತರನ್ನು ಉತ್ತೇಜಿಸಲು ಸರ್ಕಾರಗಳು ಪುಕ್ಸಟ್ಟೆ ಯೋಜನೆಗಳಿಗೆ ಖರ್ಚು ಮಾಡುವ ಅನುದಾನವನ್ನು ಕ್ರೂಢೀಕರಿಸಿ ರೈತರಿಗೆ ಸಬ್ಸಿಡಿ ನೀಡುವ ಮೂಲಕ ರೈತರ ಪರವಾಗಿ ನಿಲ್ಲಬೇಕು ಎಂದರು.
ಚಿತ್ರನಟ ಡಾಲಿ ಧನಂಜಯ ಮಾತನಾಡಿ, ಅಭಿಮಾನಿಗಳ ಶಿಳ್ಳೆ ಕೂಗು ಕೇಳಿ ಖುಷಿಯಾಗುತ್ತದೆ. ಬೆಳ್ಸಿದ್ದಲ್ಲ, ಬೆಳೆದಿದ್ದು. ಅಂಕಲ್ ನ ಹೊಡಿತೀನಿ ಸುಬ್ಬೀ ಎಂದು ಟಗರು ಸಿನಿಮಾದ ತುಣುಕಿನ ಡೈಲಾಗ್ ಹೇಳಿ ಪ್ರೇಕ್ಷಕರನ್ನು ರಂಜಿಸಿದರಲ್ಲದೆ. ಲಕ್ಷಾಂತರ ಜನರಿಗೆ ಊಟ ವಸತಿ ನೀಡಿ ಶಿಕ್ಷಣ ನೀಡುವ ಮೂಲಕ ಎಷ್ಟೋ ಜನರ ಬದುಕಿಗೆ ಸುತ್ತೂರು ಶ್ರೀಗಳು ಬೆಳಕಾಗಿದ್ದಾರೆ. ಡಾ. ಅಬ್ದುಲ್ ಕಲಾಂ, ಸಿದ್ದೇಶ್ವರ ಶ್ರೀಗಳನ್ನು ನಾನು ಹತ್ತಿರದಿಂದ ನೋಡಲು ಸಹಾಯವಾಗಿದ್ದು ಸುತ್ತೂರು ಸಂಸ್ಥೆಯಿಂದ. ನಾವು ಮನುಷ್ಯರು ತಪ್ಪು ಮಾಡುವುದು ಸಹಜ, ನಮ್ಮ ಜೊತೆ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರಂತಹ ನಿಜಗುರುಗಳು ಮಾರ್ಗದರ್ಶನದಲ್ಲಿ ಮುನ್ನೆಡೆಸುತ್ತಾರೆ ಎಂಬ ಧೈರ್ಯವಿದೆ. ನಮ್ಮ ಕಾಲದಲ್ಲಿ ಇಂತಹ ಶ್ರೀಗಳಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಚಿತ್ರ ನಟ ಎನ್.ಎಸ್. ನಾಗಭೂಷಣ ಮಾತನಾಡಿ, ನಮ್ಮ ಊರು ಸುತ್ತೂರು ಸಮೀಪದ ನಗರ್ಲೆ ಗ್ರಾಮ, ನಾನು ಚಿಕ್ಕವನಿದ್ದಾಗ ಪ್ರತಿ ಅಮಾವಾಸ್ಯೆಗೆ ಶ್ರೀ ಕ್ಷೇತ್ರಕ್ಕೆ ಬರುತ್ತಿದ್ದೆ. ನಾನು ಜೆಎಸ್.ಎಸ್. ಸಂಸ್ಥೆಯಲ್ಲಿ ಶಿಕ್ಷಣ ಪಡೆದವನು. ನಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಜೆ.ಎಸ್.ಎಸ್. ಸಂಸ್ಥೆಗಳಿಲ್ಲದಿದ್ದರೆ ನಮಗೆ ಶಿಕ್ಷಣ ದೊರಕುತ್ತಿರಲಿಲ್ಲ. ಈ ಭಾಗದಲ್ಲಿ ಸ್ಥಳೀಯ ಜನರಿಗೆ ಶಿಕ್ಷಣ ಒದಗಿಸುವ ಮೂಲಕ ಕ್ರಾಂತಿಯನ್ನೇ ಮಾಡಿದೆ ಎಂದರು.
ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ. ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್. ವಿಶ್ವನಾಥ್, ಮರಿತಿಬ್ಬೇಗೌಡ, ಡಿ. ತಿಮ್ಮಯ್ಯ, ಮಾಜಿ ಸಚಿವ ಎಂ. ಶಿವಣ್ಣ, ಶಾಸಕರಾದ ಜಿ.ಡಿ. ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಶಾಸಕ ಕೆ. ಹರೀಶ್ ಗೌಡ, ಪಿ. ರವಿಕುಮಾರ್ ಗೌಡ, ರಿಜ್ವಾನ್ ಹರ್ಷದ್, ಎಚ್.ಡಿ. ತಮ್ಮಯ್ಯ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಕುಮಾರ್, ಐಸಿಎಆರ್ ಅಟಾರಿ ಸಂಸ್ಥೆಯ ನಿರ್ದೇಶಕ ವಿ. ವೆಂಕಟ ಸುಬ್ರಮಣಿಯನ್, ಗುರುದೇವ ನಾರಾಯಣ್, ಪ್ರಗತಿಪರ ರೈತ ಎಚ್.ಕೆ. ಮಂಜುನಾಥ್ ಇದ್ದರು.