ಕನ್ನಡಪ್ರಭ ವಾರ್ತೆ ಗಂಗಾವತಿ
ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ಭಾನುವಾರ ಜರುಗಿತು. ನಗರದ ಶ್ರೀಚೆನ್ನಬಸವಸ್ವಾಮಿ ಗಂಜ್ ಎರಡನೇ ದ್ವಾರದಿಂದ ಪ್ರಾರಂಭಗೊಂಡ ಪಥ ಸಂಚಲನ ಬನ್ನಿಗಿಡ ಕ್ಯಾಂಪ್, ಬಂಬು ಬಜಾರ್ ಮಹಾವೀರ ವೃತ್ತ, ಗಣೇಶ ವೃತ್ತ , ಗಾಂಧಿ ವೃತ್ತ, ಬಸವಣ್ಣ ವೃತ್ತದ ಮೂಲಕ ಪಂಪಾನಗರದ ಕೊಟ್ಟೂರೇಶ್ವರ ಕಾಲೇಜು ಮೈದಾನಕ್ಕೆ ತಲುಪಿತು.ಮಹಾತ್ಮಾ ಗಾಂಧಿ ವೃತ್ತದಲ್ಲಿ ಪಥ ಸಂಚಲನ ಬರುತ್ತಿದ್ದಂತೆಯೇ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಗವಾಧ್ವಜ ಮತ್ತು ಸ್ವಯಂ ಸೇವಕರಿಗೆ ಪುಷ್ಪಾರ್ಪಣೆ ಮಾಡಿದರು. ಈ ವೇಳೆ ನಗರಸಭೆ ಅಧ್ಯಕ್ಷ ಮೌಲಾಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಮುಖಂಡರಾದ ಸಂತೋಷ ಕೆಲೋಜಿ, ಪಂಪಾಪತಿ ಸಿಂಗನಾಳ, ಮನೋಹರಗೌಡ, ಚಂದ್ರಪ್ಪ ಎಚ್., ಸೈಯದ್ ಅಲಿ, ವಾಸು ಎನ್., ನರಸಿಂಗರಾವ್ ಕುಲಕರ್ಣಿ ಉಪಸ್ಥಿತರಿದ್ದರು. ಪಥ ಸಂಚಲನದಲ್ಲಿ ಸುಮಾರು 200ಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಿದ್ದರು.
ತಳಿರು ತೋರಣ:ನಗರದ ಪ್ರಮುಖ ಬೀದಿಗಳ ಮೂಲಕ ಪಥ ಸಂಚಲನ ಆಗಮನದ ಹಿನ್ನೆಲೆ ರಸ್ತೆಯುದ್ದಕ್ಕೂ ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಅಂಗಡಿಗಳ ಮುಂದೆ ತಳಿರು ಹಾಕಿದ್ದರೆ ರಸ್ತೆಯ ಪಕ್ಕದಲ್ಲಿರುವ ಮನೆ ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ ಸಿಂಗರಿಸಿದ್ದರು. ಅಲ್ಲದೆ ಪಥ ಸಂಚಲನ ಬರುತ್ತಿದ್ದಂತೆ ಯುವಕರು, ಮಹಿಳೆಯರು ಸ್ವಯಂ ಸೇವಕರಿಗೆ ಪುಷ್ಪಮಳೆಗೈದರು.ಬಿಗಿ ಭದ್ರತೆ:
ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥ ಸಂಚಲನದ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿತ್ತು. ಕೆಲಕಾಲ ಸಾರ್ವಜನಿಕರ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.ಸಮಾಜದ ಉಳಿವಿಗಾಗಿ ಎಲ್ಲರೂ ಶ್ರಮಿಸಿ:
ಪ್ರಸ್ತುತ ದಿನಗಳಲ್ಲಿ ಹಿಂದೂ ಧರ್ಮ ಜಾಗೃತಿ ಅವಶ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗದ ಪ್ರಚಾರಕ ಸೋಮಶೇಖರ್ ಒಣರೊಟ್ಟಿ ಹೇಳಿದರು.ಗಂಗಾವತಿ ನಗರದ ಕೊಟ್ಟುರೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ದಸರಾ ಹಬ್ಬದ ನಿಮಿತ್ತ ಜರುಗಿದ ಆರ್‌ಎಸ್‌ಎಸ್ ಪಥ ಸಂಚಲನದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.ಹಿಂದೂ ಧರ್ಮ ರಕ್ಷಣೆ ಮಾಡದಿದ್ದರೆ ಅವನತಿಯಾಗುತ್ತಿದೆ. ಕಾರಣ ಹಿಂದೂಗಳು ಒಂದಾಗಿ ದೇಶ ರಕ್ಷಣೆ, ಧರ್ಮ ರಕ್ಷಣೆಗೆ ಮುಂದಾಗಬೇಕೆಂದರು. ಸಮಾಜದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದ ಅವರು, ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕೆಂದರು. ಬರುವ ವರ್ಷ 2025ಕ್ಕೆ ಆರ್‌ಎಸ್‌ಎಸ್ ಸಂಘಟನೆಗೆ 100 ವರ್ಷ ತುಂಬುತ್ತದೆ. ಈ ಸಂಘಟನೆ ದೇಶದಲ್ಲಿ ಹಲವಾರು ಸಮಾಜಮುಖಿ ಕಾರ್ಯ ಮಾಡಿದೆ. ಸ್ವಯಂ ಸೇವಕರು ಸ್ವಾವಲಂಬಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತೆ ಕೋವಿಡ್ ಸಂದರ್ಭದಲ್ಲಿ ಹಲವಾರು ಕಾರ್ಯ ಮಾಡಿ ಹಲವಾರು ಜನರ ಜೀವ ಉಳಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹನುಮಂತಪ್ಪ ಶಾಸ್ತ್ರಿ, ದುರ್ಗಾದಾಸ್ ಭಂಡರ್ಕಾರ್ ಇದ್ದರು.