ಬೆಳ್ತಂಗಡಿ: ದಾಖಲೆಗಳಿಲ್ಲದ ಬೈಕ್ ಅನ್ನು ಖರೀದಿಸಿ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಚಲಾಯಿಸುತ್ತಿದ್ದ ಬೈಕ್ ಸವಾರನನ್ನು ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

ಮಾ.5 ರಂದು ಬೆಳ್ತಂಗಡಿ ತಾಲೂಕಿನ ಕಳಿಯ ಗೇರುಕಟ್ಟೆ ನಿವಾಸಿ ನವಾಜ್ (19) ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಅನ್ನು ಸಂತೆಕಟ್ಟೆಯಲ್ಲಿ ಬೆಳ್ತಂಗಡಿ ಸಂಚಾರಿ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಪಿ ಮತ್ತು ಸಿಬ್ಬಂದಿ ಶಿವಾನಂದ ಎಂಬವರು ತಡೆದು ನಿಲ್ಲಿಸಿ ಪರಿಶೀಲಿಸಿದಾಗ

ನಕಲಿ ದಾಖಲೆ ಸೃಷ್ಟಿಸಿ ಬೈಕ್ ಅನ್ನು ಉಪಯೋಗಿಸುತ್ತಿರುವುದು ಬಹಿರಂಗಗೊಂಡಿದೆ.ಬೈಕ್ ನಂಬರ್ ಹಾಗೂ ಆತ ನೀಡಿರುವ ದಾಖಲೆಗಳು ಹೊಂದಾಣಿಕೆಯಾಗದೆ ಇದ್ದು ಚಾಸಿಸ್ ನಂಬರ್ ಮತ್ತು ಇಂಜಿನ್ ನಂಬರ್ ಪರಿಶೀಲಿಸಿದಾಗ ಆರ್.ಸಿ ಬುಕ್ ನಲ್ಲಿರುವ ದಾಖಲೆಗಳು ಸರಿಯಾಗಿಲ್ಲದಿರುವುದು ಕಂಡು ಬಂದಿದೆ. ಈ ಬಗ್ಗೆ ಯುವಕನನ್ನು ವಿಚಾರಿಸಿದಾಗ ಬೈಕ್‌ ಪಶ್ಚಿಮ ಬಂಗಾಳ ರಾಜ್ಯದ್ದು, ಬೈಕ್ ನ ಎಫ್.ಸಿ ಮುಗಿದಿರುವ ಕಾರಣ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ತಾನು ಫೇಸ್ ಬುಕ್ ನಲ್ಲಿ ಬಂದ ಜಾಹೀರಾತನ್ನು ನೋಡಿ ಅದಕ್ಕೆ ಆನ್ ಲೈನ್ ನಲ್ಲಿ ಹಣವನ್ನು ಪಾವತಿಸಿ ನೋಂದಣಿ ನಂಬರ್ ಹಾಗೂ ದಾಖಲೆಗಳನ್ನು ಖರೀದಿಸಿ ಬೈಕ್ ಗೆ ಅಳವಡಿಸಿರುವುದಾಗಿಯೂ ತಿಳಿಸಿದ್ದಾನೆ.ಈ ಹಿನ್ನಲೆಯಲ್ಲಿ ಯುವಕ ಹಾಗೂ ಬೈಕ್ ಅನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಪಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದ ಬೈಕ್, ಹಾಗೂ ನಕಲಿ ನಂಬರ್ ಪ್ಲೇಟ್ ಹಾಗೂ ದಾಖಲೆ ತಯಾರಿಸುವ ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.