ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಕೊನೆಯ ದಿನ ಗುರುವಾರ ಭಕ್ತಿಭಾವದ ವಾತಾವರಣದಲ್ಲಿ ನಡೆಯಿತು. ನಿರಂತರವಾಗಿ ಆಗಮಿಸಿದ ಸಹಸ್ರಾರು ಭಕ್ತರು ತಮ್ಮ ಪಾಲಕ ಸಂತ ಲಾರೆನ್ಸರಿಗೆ ಧನ್ಯತಾಭಾವ ವಂದನೆ ಸಲ್ಲಿಸಿದರು. ವಿವಿಧ ಯಾಜಕರು ದಿನವಿಡೀ ಪವಿತ್ರ ಬಲಿಪೂಜೆಗಳನ್ನು ಅರ್ಪಿಸಿದರು.ಬೆಳಗ್ಗೆ 10ಕ್ಕೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವಂ. ಡಾ. ಪೀಟರ್ ಪೌಲ್ ಸಲ್ದಾನಾ ಮುಖ್ಯ ಸಾಂಭ್ರಮಿಕ ಬಲಿಪೂಜೆ ಅರ್ಪಿಸಿ, ದೇವರು ಮಾನವನನ್ನು ನಿರ್ವ್ಯಾಜವಾಗಿ ಪ್ರೀತಿಸುವಂತೆ ನಾವು ಸಹ ಪರಸ್ಪರ ಪ್ರೀತಿಸಬೇಕು ಎಂದು ಸಂದೇಶ ನೀಡಿದರು.ಬಸಿಲಿಕಾದ ರೆಕ್ಟರ್ ವಂ. ಅಲ್ಬನ್ ಡಿಸೋಜ ಅವರು ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ದೇಣಿಗೆ ನೀಡಿದ ಭಕ್ತರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ‘ಧರ್ಮ ರಕ್ಷಣೆ’ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು.