ಸಾಲ ಮಾಡಿಕೊಳ್ಳಲು ಕೆನರಾ ಬ್ಯಾಂಕ್ ಕ್ರಮ । ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ । ಬ್ಯಾಂಕ್ ಡಿಜಿಎಂಗೆ ಘೇರಾವ್
ಕನ್ನಡಪ್ರಭ ವಾರ್ತೆ ಹಾಸನ
ಪಡೆದಿದ್ದ ಸಾಲ ತೀರಿಸಿಲ್ಲ ಎನ್ನುವ ಕಾರಣಕ್ಕೆ ಇ ಟೆಂಡರ್ ಮೂಲಕ ಭೂಮಿ ಹರಾಜು ಮಾಡಿದ್ದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿ ಬ್ಯಾಂಕ್ ಡಿಜಿಎಂ ಪಿ.ವಿ.ಜಯಕುಮಾರ್ ಅವರಿಗೆ ಘೇರಾವ್ ಹಾಕಿದರು. ಬಳಿಕ ಅವರಿಂದಲೇ ಆಶ್ವಾಸನೆ ಪಡೆದರು.ಆಲೂರು ತಾಲೂಕಿನ ರಾಯರಕೊಪ್ಪಲು ಕೆನರಾ ಬ್ಯಾಂಕ್‌ನಲ್ಲಿ ರುದ್ರಪ್ಪ ಎಂಬುವವರು 7.5 ಅಕರೆ ಜಮೀನನ್ನು ಅಡವಿಟ್ಟು 10 ಲಕ್ಷ ರುಪಾಯಿ ಸಾಲ ಪಡೆದಿದ್ದರು. ಆದರೆ, ಸರಿಯಾದ ಸಮಯದಲ್ಲಿ ಬಡ್ಡಿ ಕಟ್ಟದ ಕಾರಣ ಸಾಲ 42 ಲಕ್ಷ ರು. ಆಗಿತ್ತು. ಇದೀಗ ಬ್ಯಾಂಕ್ ಈ ಆಸ್ತಿಯನ್ನು ಇ ಹರಾಜಿನ ಮೂಲಕ 65 ಲಕ್ಷ ರುಪಾಯಿಗೆ ಮಾರಾಟ ಮಾಡಿದೆ. ರುದ್ರಪ್ಪ ಅವರು ಇಷ್ಟು ದೊಡ್ಡ ಮೊತ್ತದ ಬಡ್ಡಿಯನ್ನು ಪಾವತಿಸಲು ಸಾಧ್ಯವಿಲ್ಲ. ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡಿದ್ದು, ಅಸಲು ಕಳೆದು ಉಳಿಕೆ ಮೊತ್ತವನ್ನು ರುದ್ರಪ್ಪ ಅವರಿಗೆ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಮಗ್ಗೆ ರಾಯರ ಕೊಪ್ಪಲಿನ ಶಿವಕುಮಾರ್ ಎಂಬುವರ 7.5 ಎಕರೆ ಜಮೀನನ್ನು ೧೨ ವರ್ಷಗಳ ಹಿಂದೆ ಅಡವಿಟ್ಟು ೧೦ ಲಕ್ಷ ರು. ಸಾಲ ಪಡೆದಿದ್ದರು. ಆದರೆ ಈಗ ಈ ಜಮೀನನ್ನು ಹರಾಜು ಹಾಕಿದ್ದು, ಈಗಾಗಲೇ ಅವರ ಅಕ್ಕ-ತಂಗಿಯರು ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದಿದ್ದು ೧೦ ಲಕ್ಷ ರು. ಆದರೆ ಜಮೀನನ್ನು ಹರಾಜು ಹಾಕಿರುವುದು 67 ಲಕ್ಷ ರು.ಗೆ. ಈ ಬಗ್ಗೆ ಸ್ಪಷ್ಟನೆ ಕೇಳಿದರೆ ಹರಾಜು ಆಗಿದೆ ಎಂದು ಬೇಜವಾಬ್ದಾರಿಯಾಗಿ ಹೇಳುತ್ತಾರೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘದ ಮುಖಂಡರಾದ ಶಿವಕುಮಾರ್, ಮಂಜುನಾಥ್, ಮಲ್ಲೇಶ್, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.
ನ್ಯಾಯಾಲಯದ ಮೂಲಕ ಸಾರ್ವಜನಿಕ ಪ್ರಕಟಣೆಯನ್ನೂ ನೀಡಿ ಹರಾಜು ಮಾಡಲಾಗಿದೆ ಎಂದು ಹೇಳಿದರು. ಹಾಸನದಲ್ಲಿ ರೈತ ಸಂಘದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ಕೆನರಾ ಬ್ಯಾಂಕ್ ಅಧಿಕಾರಿಗಳು.