- ತೀರ್ಥಹಳ್ಳಿಯಲ್ಲಿ ತಾಲೂಕು ಬಿಜೆಪಿಯಿಂದ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ
- - -ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ರಾಜ್ಯದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 16 ಲಕ್ಷ ಮಂದಿ ಪಿಂಚಣಿ ವೇತನಗಳ ಫಲಾನುಭವಿಗಳ ಕಾರ್ಡ್ ರದ್ದಾಗಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ 3,000ಕ್ಕೂ ಅಧಿಕ ವಿವಿಧ ಪಿಂಚಣಿ ವೇತನಗಳ ಫಲಾನುಭವಿಗಳನ್ನು ವಂಚಿಸಲಾಗುತ್ತಿದೆ ಎಂದು ತೀರ್ಥಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ದೂರಿದರು.ಸೋಮವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ವೇಳೆ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ರಚಿಸಿದ ಅದರ ಅಧ್ಯಕ್ಷರಿಗೆ ಸಂಬಳ ಕೊಟ್ಟು ಸರ್ಕಾರ ಸಾಕುತ್ತಿದೆ. ಆದರೆ, ಈವರೆಗೂ ವಂಚಿತ ಫಲಾನುಭವಿಗಳ ಅಹವಾಲು ಕೇಳುವ ಸೌಜನ್ಯ ಬೆಳೆಸಿಕೊಂಡಿಲ್ಲ. ಹೊಸ ವಿದ್ಯುತ್ ಸಂಪರ್ಕಕ್ಕೆ ₹20,000 ವೆಚ್ಚ ತಗಲುತ್ತಿದೆ. ವಾಲ್ಮೀಕಿ, ಮೂಡ, ಬಿಡದಿ ಟೌನ್ ಶಿಪ್ ಮೂಲಕ ಹಗರಣಗಳ ಸರ್ಕಾರವಾಗಿ ಬದಲಾಗಿದೆ ಎಂದು ಟೀಕಿಸಿದರು.
“ಅಧಿಕಾರಿಗಳಿಗೆ ತೊಂದರೆ ಕೊಟ್ಟು ಮಾಜಿ ಶಾಸಕರು ತಮ್ಮ ಅವಧಿ ಕಳೆದಿದ್ದಾರೆ. ಆರಗ ಜ್ಞಾನೇಂದ್ರ ಅವರ ಅಭಿವೃದ್ಧಿಯಿಂದಾಗಿ ಇನ್ನು ಮುಂದೆ ಅವರು ಕಾಯಂ ಮಾಜಿಯಾಗಿಯೇ ಇರುತ್ತಾರೆ” ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ಮಾಜಿ ಸಚಿವ ಕಿಮ್ಮನೆ ವಿರುದ್ಧ ಲೇವಡಿ ಮಾಡಿದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್ ಮಾತನಾಡಿ, “ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿಗೆ ಹಣ ಇಲ್ಲದಂತಾಗಿದೆ. ಅದಕ್ಕಾಗಿ ಬಡವರ ಪಡಿತರ ಚೀಟಿ ರದ್ದುಪಡಿಸುವ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಹೊಸ ಪಡಿತರ ಚೀಟಿಯನ್ನು ನೀಡುವುದನ್ನು ಸರ್ಕಾರ ನಿಲ್ಲಿಸಿದೆ” ಎಂದು ಆರೋಪಿಸಿದರು.
ಮುಖಂಡ ಚಂದವಳ್ಳಿ ಸೋಮಶೇಖರ್ ಮಾತನಾಡಿ, “ನೇರವಾಗಿ ಚುನಾವಣೆ ಮೂಲಕ ಪಂಚಾಯಿತಿ ಸದಸ್ಯ ಆಗದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ” ಎಂದು ದೂರಿದರು.ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸುವ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಮುಖಂಡರಾದ ಶಂಕರನಾರಾಯಣ ಐತಾಳ್, ರಕ್ಷಿತ್ ಮೇಗರವಳ್ಳಿ, ಕುಡುಮಲ್ಲಿಗೆ ಅಂಜೂರ, ಹೊಸಳ್ಳಿ ಸುಧಾಕರ, ಸಂತೋಷ್ ದೇವಾಡಿಗ, ಮೋಹನ್ ಶೆಟ್ಟಿ ಇದ್ದರು.
- - -(ಕೋಟ್) * ಪೂರ್ಣ ಮನುವಾದ ಒಪ್ಪುವುದಿಲ್ಲ ಮನುವಾದ ರಚನೆಯಾಗಿ ನೂರಾರು ವರ್ಷಗಳು ಕಳೆದಿದೆ. ಅದರಲ್ಲಿ ಹೇಳಿರುವ ಕೆಲವು ವಿಷಯಗಳು ನಮಗೂ ಅವಶ್ಯಕತೆ ಇಲ್ಲ. 75 ವರ್ಷದ ಹಿಂದೆ ರಚನೆಯಾದ ಸಂವಿಧಾನ ಹೇಗೆ ಬದಲಾಗಿದೆಯೋ ಹಾಗೆಯೇ ಮನಸೃತಿಯಲ್ಲಿಯೂ ಬದಲಾವಣೆ ಬೇಕಿದೆ. ಮಾಜಿ ಶಾಸಕರು, ಕಿಮ್ಮನೆ ರತ್ನಾಕರ ಅವರಿಗೆ ಇವುಗಳ ಬಗ್ಗೆ ಚರ್ಚಿಸಲು ನಾನು ಸಿದ್ಧನಿದ್ದೇನೆ. ಚರ್ಚೆ ಮಾಡೋಣ ಬನ್ನಿ.
- ಹೆದ್ದೂರು ನವೀನ್, ಮುಖಂಡ.- - -
-06ಟಿಟಿಎಚ್01: ತೀರ್ಥಹಳ್ಳಿಯಲ್ಲಿ ತಾಲೂಕು ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.