- -ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕುಸುಬೂರು, ಕೆ.ಕಣಬೂರು ಕಾಲೋನಿ,ದೊಡ್ಡಿನತಲೆ, ಸಾತ್ಕೋಳಿ ಗ್ರಾಮಗಳ ನೂರಾರು ಜನರ ಆತಂಕ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಮುತ್ತಿನಕೊಪ್ಪದಿಂದ - ಕೆ.ಕಣಬೂರು ಕಾಲೋನಿ,ಕುಸುಬೂರು, ದೊಡ್ಡಿನತಲೆ, ಸಾತ್ಕೋಳಿ ಸಂಪರ್ಕಿಸುವ ಕೆ.ಕಣಬೂರು ಕಾಲೋನಿ ಸೇತುವೆ ಕುಸಿಯುತ್ತಿದ್ದು ನೂರಾರು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಮುತ್ತಿನಕೊಪ್ಪದಿಂದ ಅಂದಾಜು 3 ಕಿ.ಮೀ. ದೂರದ ಕೆ.ಕಣಬೂರು ಕಾಲೋನಿಯಲ್ಲಿ ಮುಖ್ಯರಸ್ತೆಯಲ್ಲಿನ ಕರಿ ಬಸವನ ಹಳ್ಳಕ್ಕೆ ಭದ್ರಾ ಡ್ಯಾಂ ಕಟ್ಟಿದ ನಂತರ ರೈತರ ಪುನರ್ವಸತಿಗೆ 60 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಭದ್ರಾ ಮೇಲ್ದಂಡೆ ಯೋಜನೆಗೆ ದೊಡ್ಡ, ದೊಡ್ಡ ವಾಹನಗಳು ಈ ಸೇತುವೆ ಮೇಲೆ ಓಡಾಡುವುದರಿಂದ ಕಾಲ ಕ್ರಮೇಣ ಈ ಸೇತುವೆ ಶಿಥಿಲಾವಸ್ಥೆ ತಲುಪಿದೆ.

ಸೇತುವೆ ಎರಡು ಭಾಗದ ಕೈಪಿಡಿಗಳು ಬಿದ್ದಿದೆ. ಒಂದು ಭಾಗದ ಸಿಮೆಂಟ್, ಕಲ್ಲುಗಳು ಹಳ್ಳಕ್ಕೆ ಜರಿಯುತ್ತಿದೆ. ಸಾತ್ಕೋಳಿ, ದೊಡ್ಡಿನತಲೆ, ಕುಸುಬೂರು ಹಾಗೂ ಕೆ.ಕಣಬೂರಿನಿಂದ ಮುತ್ತಿನಕೊಪ್ಪಕ್ಕೆ ಇದೇ ಸೇತುವೆ ಮೇಲೆ ಹೋಗಬೇಕಾಗಿದೆ.ಶಾಲಾ ಮಕ್ಕಳು ಇದನ್ನೆ ಬಳಸಬೇಕಿದೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಸೇತುವೆ ಕುಸಿಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.


-- ಬಾಕ್ಸ್---

ಬಳಸಿ ಬರುವ ಮಾರ್ಗವೂ ಸರಿಯಿಲ್ಲ

ಕೆ.ಕಣಬೂರು ಕಾಲೋನಿ ಸೇತುವೆ ಕುಸಿದರೆ 4 ಗ್ರಾಮಗಳ ಜನರು, ಶಾಲಾ ಮಕ್ಕಳು ಸುತ್ತುವರಿದು ಭದ್ರಾ ಮೇಲ್ದಂಡೆ ಯೋಜನೆಯಡಿ ಬರುವ ಮೊದಲೇ ಸ್ಟೇಜ್‌ ಪಂಪ್ ಹೌಸ್ ಮಾರ್ಗವಾಗಿ ಮುತ್ತಿನಕೊಪ್ಪಕ್ಕೆ ಬರಬೇಕಾಗಿದೆ. ಆದರೆ, ಆ ರಸ್ತೆ ಕೆಲವು ಭಾಗದಲ್ಲಿ ಕಾಡು ಮಾರ್ಗವಿದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ದೊಡ್ಡ, ದೊಡ್ಡ ವಾಹನಗಳು ಬರುವುದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಬೈಕ್, ಕಾರು, ಆಟೋ ರಿಕ್ಷಾ ಮುಂತಾದ ಸಣ್ಣ ವಾಹನ ಹೋದರೆ ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತದೆ. ಇದರಿಂದ ಶಾಲಾ ಮಕ್ಕಳು, ವೃದ್ಧರು ಮುತ್ತಿನಕೊಪ್ಪಕ್ಕೆ ಹೋಗುವುದೇ ಕಷ್ಠವಾಗಲಿದೆ. ಸೇತುವೆ ಸಂಪೂರ್ಣ ಕೊಚ್ಚಿಹೋದರೆ ಬದಲಿ ಮಾರ್ಗ ಯಾವುದು ಎಂಬ ಚಿಂತೆಯಲ್ಲಿ ಗ್ರಾಮಸ್ಥರು ಸಿಲುಕಿದ್ದಾರೆ.

-- ಬಾಕ್ಸ್

ಹೊಸ ಸೇತುವೆಗೆ ₹2.80 ಕೋಟಿ ಮಂಜೂರು

ಹೊಸ ಸೇತುವೆಗೆ ಗ್ರಾಮಸ್ಥರು ಸರ್ಕಾರಕ್ಕೆ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಟಿ.ಡಿ.ರಾಜೇಗೌಡ ಈ ಹೊಸ ಸೇತುವೆಗೆ ₹2.80 ಕೋಟಿ ಮಂಜೂರು ಮಾಡಿಸಿದ್ದಾರೆ. ಹೊಸ ಸೇತುವೆ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ. ಹಳೇ ಸೇತುವೆ ಪಕ್ಕದಲ್ಲಿ ಹೊಸ ಸೇತುವೆಗೆ ಫೌಂಡೇಷನ್ ಕಾಮಗಾರಿ ಪ್ರಾರಂಭವಾಗಿದೆ. ಆದರೆ, ಹೊಸ ಸೇತುವೆ ನಿರ್ಮಾಣಕ್ಕೂ ಮುನ್ನವೇ ಹಳೇ ಸೇತುವೆ ಕೊಚ್ಚಿ ಹೋಗುವುದೋ ಎಂಬ ಆತಂಕ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಸೋಮವಾರ ಭದ್ರಾ ಮೇಲ್ದಂಡೆ ಯೋಜನೆ ಅಸಿಸ್ಟಂಟ್ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಜೇಸಿಬಿ ಯಂತ್ರದ ಮೂಲಕ ಸೇತುವೆ ಕೆಳಗೆ ಹರಿಯುತ್ತಿರುವ ಹಳ್ಳದ ನೀರು ನಿಲ್ಲದೆ ಸರಾಗವಾಗಿ ಹೋಗಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ಕೃಷಿಕರಾದ ರವಿಕುಮಾರ್, ಬೆಳ್ಳಪ್ಪ, ಸತೀಶ್, ಹೂವಪ್ಪ ಮುಂತಾದವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.