ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳ ಬಗ್ಗೆ ರೈತರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ. ತೆಂಗು, ಅಡಿಕೆ ಬೆಳೆಗಳ ನಡುವೆ ಬೆಳೆಯ ಬಹುದಾದಂತಹ ಲಾಭದಾಯಕ ಬೆಳೆಗಳ ಬಗ್ಗೆ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ಮಾಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳ ಬಗ್ಗೆ ರೈತರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ. ತೆಂಗು, ಅಡಿಕೆ ಬೆಳೆಗಳ ನಡುವೆ ಬೆಳೆಯ ಬಹುದಾದಂತಹ ಲಾಭದಾಯಕ ಬೆಳೆಗಳ ಬಗ್ಗೆ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ಮಾಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚಿಸಿದರು. ಪಟ್ಟಣದ ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ತೆಂಗಿನ ಬೆಳೆ ಹೆಚ್ಚಾಗಿದ್ದು ಕೊಬ್ಬರಿಯನ್ನು ಹೊರತು ಪಡಿಸಿ ಅದರ ಉಪ ಉತ್ಪನ್ನಗಳ ತಯಾರಿಸುವ ಘಟಕಗಳ ಸ್ಥಾಪನೆ ಮಾಡಬೇಕು. ನಮ್ಮ ಈ ಮಣ್ಣಿನಲ್ಲಿ ಬೆಳೆಯ ಬಹುದಾದಂತಹ ಬೆಳೆಗಳ ಅದರಿಂದ ಸಿಗಬಹುದಾದ ಲಾಭ ನಷ್ಟದ ಹಾಗೂ ಬೆಳೆಯ ಬಗ್ಗೆ ರೈತರಲ್ಲಿ ಭರವಸೆಯನ್ನು ಮೂಡಿಸುವಂತಹ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಗಣಿಭಾದಿತ ಪ್ರದೇಶಾಭಿವೃದ್ಧಿ ಯೊಜನೆಯಡಿ ಕೃಷಿಗೆ ಸಂಬಂಧಿಸಿದಂತೆ ಪ್ರಯೋಗಶಾಲೆಯನ್ನು ತೆರೆಯುವ ಬಗ್ಗೆ ಸೂಚನೆ ನೀಡಿದರು. ತೆಂಗಿನ ಬಿಳಿನೋಣದ ಹಾವಳಿಯನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು. ಈ ಹಿಂದೆ ಡ್ರೋಣ್ ಬಳಸಿ ಔಷಧಿ ಸಿಂಪಡಿಸುವ ಕೆಲಸ ಮಾಡಲಾಯಿತಾದರೂ ಅದು ಯಶಸ್ವಿಯಾಗಲಿಲ್ಲ. ತೆಂಗಿನ ಮರಕ್ಕೆ ಕೆಳಭಾಗದಿಂದ ಸಿಂಪಡಿಸುವಂತಹ ಡ್ರೋಣ್‌ಗಳನ್ನು ಸರ್ಕಾರವು ತಾಲೂಕಿಗೊಂದರಂತೆ ನೀಡಬೇಕು ಎಂದರು.ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಾರದಮ್ಮ ಮಾತನಾಡಿ, ಈಗಾಗಲೇ ಸರ್ಕಾರದಿಂದ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನವನ್ನು ಸರಿಯಾಗಿ ಬೇಗ ಮುಗಿಸಿದರೆ. ಇನ್ನು ಹೆಚ್ಚಿನ ಅನುದಾನವನ್ನು ಕೇಳಬಹುದು. ಆದ್ದರಿಂದ ಇರುವಂತಹ ಯೋಜನೆಗಳ ಮೂಲಕ ರೈತರಿಗೆ ಅಗತ್ಯ ನೆರವನ್ನು ನೀಡುವಂತಹ ಕೆಲಸವನ್ನು ಬೇಗ ಮುಗಿಸಿ ಎಂದರು. ಈ ಸಂದರ್ಭದಲ್ಲಿ ಹಿರಿಯಕ ಸಹಾಯಕ ನಿರ್ದೇಶಕ ರಾಜಪ್ಪ ಇಲಾಖೆಯಿಂದ ಕೈಗೊಂಡ ಕೆಲಸಗಳನ್ನ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕ ಚಿತ್ತೇಶ್ ಸಿ, ಸೇರಿದಂತೆ ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಚೇತನ್ ಕುಮಾರ್, ಗುರುಸ್ವಾಮಿ, ಶರತ್, ನಿತೀಶ್, ಪ್ರಕಾಶ್ ಹಾಗೂ ಇತರರು ಇದ್ದರು.