ಕಡೂರು: ಶ್ರೀ ಕ್ಷೇತ್ರದ ಯೋಜನೆ ಜನರು ಮತ್ತು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಸೋಮವಾರ ಪಟ್ಟಣದ ಕೋಟೆಯಶಂಕರ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ನಡೆದ ವರಮಹಾಲಕ್ಷ್ಮಿ ಪೂಜೆ, ಶೋಭಾ ಯಾತ್ರೆ ಮತ್ತು ಭಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀಕ್ಷೇತ್ರದ ಯೋಜನೆಯಿಂದ ಜನರಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದೆ.

ಭಜನೆಗಳ ಮೂಲಕ ಸಮಾಜ ತಿದ್ದುವ ಕೆಲಸ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ಭಜನೆಗಳಿಂದ ಜನರನ್ನು ಸನ್ಮಾರ್ಗದೆಡೆಗೆ ಕರೆದೊಯ್ಯಲು ಶ್ರೀ ಮಂಜುನಾಥಸ್ವಾಮಿಯ ಪ್ರೇರಣೆಯಿಂದ ಆಗುತ್ತಿದ್ದು,ಸಮಾಜವನ್ನು ಯುವ ಸಮೂಹವನ್ನು ಧಾರ್ಮಿಕತೆಯತ್ತ ಸೆಳೆಯಲು ಇಂತಹ ಕಾರ್ಯಗಳು ಹೆಚ್ಚು ಹೆಚ್ಚಾಗಲಿ ಎಂದು ಹೇಳಿ ಶುಭ ಹಾರೈಸಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಗೀತಾ ಬಿ. ರವರು ಮಾತನಾಡಿ, ನಮ್ಮ ಪ್ರೇರಣಾ ಶಕ್ತಿಯಾದ ಶ್ರೀಮಂಜನಾಥ ಸ್ವಾಮಿ ಆಶೀರ್ವಾದ ಪಡೆಯೋಣ, ಸಮಾಜ ಪರಿವರ್ತನೆಗೆ ಹೆಗ್ಗಡೆಯವರ ಆದರ್ಶವನ್ನು ಪಡೆಯೋಣ. ಕ್ಷಣಿಕ ಸುಖದ ಬಾಹ್ಯ ಸೌಂದರ್ಯ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತೇವೆ. ಆದರೆ ಮನಸ್ಸಿನ ಸೌಂದರ್ಯದ ಮನದ ಮಲವನ್ನು ಮೊದಲು ತೊಳೆಯಬೇಕು. ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಅದೃಷ್ಟವಂತರು ಹಾಗಾಗಿ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.

ಯೋಜನೆಯಿಂದ 6 ಲಕ್ಷ ಸಂಘಗಳನ್ನು ರಚಿಸಿ ರಾಜ್ಯದ 52 ಲಕ್ಷ ಜನರ ಅಭಿವೃದ್ದಿಗೆ ಶ್ರಮಿಸಿದೆ. ಅಲ್ಲದೆ 25 ಸಾವಿರ ಹಳ್ಳಿಗಳಲ್ಲಿ ಪರಿಸರ ಉಳಿಸಲು, ಕೆರೆ ಜೀರ್ಣೋದ್ದಾರದ ಕೆಲಸ ಮತ್ತು ಯುವ ಜನರ ಮನ ಪರಿವರ್ತಿಸಿ ಭಜನೆ ಮೂಲಕ ಸಂದೇಶ ನೀಡುವ ಕೆಲಸದ ಜೊತೆ ದೇವರನ್ನು ಸೇರುವ ಸಂಪರ್ಕ ಆಗಿದೆ. ಈ ನಿಟ್ಟಲ್ಲಿ ಭಜನಾ ಮಂಡಳಿಗಳನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯರು ಸಂದೇಶ ನೀಡಿ, ಬೇರೆಯವರಿಗೆ ತೊಂದರೆ ನೀಡದಿರುವುದೇ ಸಂಸ್ಕಾರ ಹಾಗು ಧರ್ಮವಾಗಿದೆ. ಸಂಸ್ಕಾರ, ಸಹಕಾರ,ಸಮಾನತೆ ತೋರಿಸುತ್ತದೆ. ನಂಬಿಕೆಯೇ ದೇವರಾಗಿದ್ದು. ಎಲ್ಲರಲ್ಲೂ ದೇವರಿದ್ದಾನೆ ಮನ ಪರಿವರ್ತನೆಗೆ ಭಜನೆಗಳು ಬೇಕು. ಅದರಿಂದ ಸಮಾಜ ತಿದ್ದುವ ಕೆಲಸ ಮಾಡುತ್ತವೆ. ಮಕ್ಕಳಿಗೆ ವಿದ್ಯೆ ಜೊತೆ ಸಂಸ್ಕಾರವನ್ನು ಕಲಿಸಬೇಕು. ಆದರೆ ಖಾಸಗಿಯಾಗಿ ಬದುಕುವ ಪದ್ದತಿ ಅಪಾಯಕಾರಿ. ಇದನ್ನು ನಿವಾರಿಸುವ ನಿಟ್ಟಲ್ಲಿ ಶ್ರೀ ಯೋಜನೆ ಕೆಲಸ ಮಾಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಯೋಜನೆಯ ತಾಲೂಕು ಅಧಿಕಾರಿ ನಾಗವೇಣಿಯವರು ಶ್ರೀಗಳು ಸಮಾಜವನ್ನು ಪರಿವರ್ತನೆ ಹಾದಿಯಲ್ಲಿ ತರುವ ನಿಟ್ಟಲ್ಲಿ ಕಾರ್ಯಪ್ರವೃತ್ತರಾಗಲಿ ಎಂದು ನೀಡಿದ ಸಂದೇಶವನ್ನು ಓದಿದರು.


ಇದೇ ಸಂದರ್ಭದಲ್ಲಿ ಅಮೃತ ಹೆಜ್ಜೆಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನಿಂದ ಬಂದ ವಿವಿಧ ಭಜನಾ ಮಂಡಳಿಗಳಿಂದ ಕಾರ್ಯಕ್ರಮಗಳು ನಡೆದವು

ಕಡೂರು ಭಜನೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ್, ಭಜನೋತ್ಸವ ಸಮಿತಿ ಗೌರವಾಧ್ಯಕ್ಷೆ ಶ್ರೀಮತಿ ಆಶಾ ತಮ್ಮಯ್ಯ, ಎಂ.ಎಲ್. ಗಂಗಾಧರನಾಯ್ಕ, ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯ ರವಿ ಶಂಕರ್ ಸೇರಿದಂತೆ ಮತ್ತಿತರರು ಇದ್ದರು.

6ಕೆಕೆಡಿಯು1. ಕಡೂರು ಪಟ್ಟಣದ ಕೋಟೆಯ ಶಂಕರಮಠದಲ್ಲಿ ಶ್ರೀಕ್ಷೇತ್ರದ ಯೋಜನೆಯ ಕಾರ್ಯಕ್ರಮದಲ್ಲಿ ಅಮೃತ ಹೆಜ್ಜೆಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಭಂಡಾರಿ ಶ್ರೀನಿವಾಸ್ , ಗೀತಾ, ನಾಗವೇಣಿ ಮತ್ತಿತರು ಇದ್ದರು.