ಮೆಣಸಗಿ: ರೋಣ ತಾಲೂಕಿನ ಮೆಣಸಗಿಯ ಲಿಂಗಬಸವೇಶ್ವರ ಸಂಸ್ಥಾನ ಹಿರೇಮಠದ ಜಾತ್ರಾ ಮಹೋತ್ಸವ, ತುಲಾಭಾರ ಮತ್ತು ಸಾಮೂಹಿಕ ವಿವಾಹ ಸಮಾರಂಭ ಆ. 14ರಿಂದ 16ರ ವರೆಗೆ ನಡೆಯಲಿವೆ.
ಆ. 14ರಂದು ಬೆಳಗ್ಗೆ 6 ಗಂಟೆಗೆ ಕರ್ತುೃ ಗದ್ದುಗೆಗೆ ರುದ್ರಾಭಿಷೇಕ, ಮಧ್ಯಾಹ್ನ 3 ಗಂಟೆಗೆ ಲಿಂಗಬಸವೇಶ್ವರ ರಥೋತ್ಸವವು ಸಕಲ ಸದ್ಭಕ್ತರಿಂದ ವಿಜೃಂಭಣೆಯಿಂದ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದವಿದೆ. ರಾತ್ರಿ 10 ಗಂಟೆಗೆ ಗ್ರಾಮದ ಬೀರಲಿಂಗೇಶ್ವರ ನಾಟ್ಯಸಂಘದಿಂದ ರೈತನ ರಾಜ್ಯದಲ್ಲಿ ರಾಯಣ್ಣ ನಾಟಕ ಪ್ರದರ್ಶನವಿದೆ.ಆ. 15ರಂದು ಮುಂಜಾನೆ 10 ಗಂಟೆಗೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ (ಸಿಡಿ ಹೊಡೆಯುವುದು) ಜರುಗುವುದು.
ವಿಜೇತರಿಗೆ ಪ್ರಥಮ ₹ 5001, ದ್ವಿತೀಯ 3001, ತೃತೀಯ 1501 ಹಾಗೂ 1 ಕಡೆ ಬಹುಮಾನಗಳಿವೆ.ರಾತ್ರಿ 9.30ಕ್ಕೆ ಸವಾಲ್ ಜವಾಬ ಭಜನಾ ಕಾರ್ಯಕ್ರಮವಿದೆ. ಧಾರವಾಡ ಜಿಲ್ಲೆಯ ಕನಕೂರ ರಾಮಲಿಂಗೇಶ್ವರ ಭಜನಾ ಸಂಘ, ಕಲಘಟಗಿಯ ಬಸವನಕೊಪ್ಪದ ಬಸವೇಶ್ವರ ಭಜನಾ ಸಂಘದವರು ನಡೆಸಿಕೊಡಲಿದ್ದಾರೆ.
ಸಾಯಂಕಾಲ 7 ಗಂಟೆಗೆ ಶಿವಾನುಭವ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಕಿಲ್ಲಾ ತೊರಗಲ್ಲದ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಬಾದಾಮಿ ತಾಲೂಕಿನ ಸಿದ್ಧನಕೊಳ್ಳದ ನಿರಂತರ ದಾಸೋಹಮಠದ ಡಾ. ಶಿವಕುಮಾರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಲಿಂಗಬಸವೇಶ್ವರ ಹಿರೇಮಠದ ಮುದಿಯಪ್ಪಯ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಸಾಹಿತಿ ಚನ್ನಪ್ಪ ಅಂಗಡಿ ಉಪನ್ಯಾಸಕರಾಗಿ ಆಗಮಿಸುವರು. ಸಂಶೋಧಕ ಪ್ರಕಾಶಗೌಡ ಕ್ಯಾಮನಗೌಡರ, ಪಿಎಸ್‌ಐ ಸಂಜಯ ಬ. ಬಾದಾಮಿ ಅವರನ್ನು ಸನ್ಮಾನಿಸಲಾಗುವುದು. ಅಣ್ಣಿಗೇರಿಯ ಬಸವರಾಜ ಯಳವತ್ತಿ, ಹಾಲಕುಸಗಲ್ಲನ ಮಲ್ಲಪ್ಪ ಬೆಳವಡಿ, ಬೆನಕೊಪ್ಪದ ಹುಚ್ಚಪ್ಪ ನಿಂ. ಚಲವಾದಿ, ಹೊಂಬಳದ ಮಾರುತಿ ಬಾಳಮ್ಮನವರ, ಯಾವಗಲ್ಲಿನ ಗದಿಗೆಪ್ಪ ಕಡಿಯವರ ಅತಿಥಿಗಳಾಗಿ ಆಗಮಿಸುವರು.ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು.
ಆ. 16ರಂದು ಮುಂಜಾನೆ 8.30 ಗಂಟೆಗೆ ತುಲಾಭಾರ ಕಾರ್ಯಕ್ರಮವಿದೆ. ಗುರಯ್ಯನವರು, ಮುದಿಯಪ್ಪಸ್ವಾಮಿ ಹಿರೇಮಠ ಅವರ 25ನೇ ಪುಣ್ಯಸ್ಮರಣೆ ಪ್ರಯುಕ್ತ ಕಲ್ಲಯ್ಯನವರಿಗೆ ತುಲಾಭಾರ ನೆರವೇರಿಸಲಾಗುವುದು.ಮುಂಜಾನೆ 10.30 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭವಿದೆ. ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯವಹಿಸುವರು. ಬಾದಾಮಿ ನವಗ್ರಹ ಹಿರೇಮಠ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಮೆಣಸಗಿಯ ಮುದಿಯಪ್ಪಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಶಾಸಕ ಬಿ.ಬಿ. ಚಿಮ್ಮನಕಟ್ಟಿ, ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ, ಲೋಕಾಪುರದ ರಮೇಶ ಚ. ಪಂಚಕಟ್ಟಿಮಠ, ಗದಗ ಉದ್ಯಮಿ ಕಿರಣಕುಮಾರ ಬೂಮಾ, ಮೆಣಸಗಿ ಗ್ರಾಪಂ ಅಧ್ಯಕ್ಷ ಪುಂಡಲೀಕಪ್ಪ ಬ. ಅಸೂಟಿ, ಉಪಾಧ್ಯಕ್ಷರು, ಸರ್ವ ಸದಸ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾತ್ರಿ 10 ಗಂಟೆಗೆ ಮೆಣಸಗಿಯ ಸಿದ್ಧಲಿಂಗೇಶ್ವರ ಹಾಗೂ ಗ್ರಾಮದೇವಿ ನಾಟ್ಯಸಂಘದಿಂದ ದೇವರು ಕೊಟ್ಟ ತಂಗಿ ನಾಟಕ ಪ್ರದರ್ಶನವಿದೆ ಎಂದು ಪ್ರಕಟಣೆ ತಿಳಿಸಿದೆ.ರೋಣ ತಾಲೂಕಿನ ಮೆಣಸಗಿಯ ಪವಾಡ ಪುರುಷ ಲಿಂಗಬಸವೇಶ್ವರರು ಸಿದ್ಧಿ ಪುರುಷರು, ಮೂಲತಃ ಬೆಳಗಾವಿಯ ಯಾದವಾಡದಿಂದ ಸಂಚಾರ ಜೀವನವನ್ನು ನಡೆಸಿಕೊಳ್ಳುತ್ತಾ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ''''ಸುಳ್ಳ'''' ಗ್ರಾಮಕ್ಕೆ ಬಂದರು. ನಂತರದಲ್ಲಿ ಅಲ್ಲಿಂದ ರೋಣ ತಾಲೂಕಿನ ಮೆಣಸಗಿಯ ಗ್ರಾಮಕ್ಕೆ ಬಂದು ನೆಲೆಸಿದರು.
ಸುಳ್ಳ, ಮೆಣಸಗಿ, ಗುಳಗಂದಿ, ಭೋಪಾಳಾಪುರ, ಬೆಳವಣಕಿಗಳಲ್ಲಿ ಇದರ ಮಠಗಳು ಇವೆ. ತಮ್ಮ ಇಷ್ಟಾರ್ಥ ಸಿದ್ಧಿ ಆಗಿದ್ದಕ್ಕೆ ಎಲ್ಲ ಭಕ್ತರು ಕೂಡಿ ತಮ್ಮ ಊರುಗಳಲ್ಲಿ ಮಠಗಳನ್ನು ಸ್ಥಾಪಿಸಿಕೊಂಡು ಅಜ್ಜನವರ ಕೃಪೆಗೆ ಪಾತ್ರರಾಗಿದ್ದಾರೆ.ಶ್ರೀ ಮಠದ ವಿವರ: ಸುಮಾರು 150 ವರ್ಷಗಳ ಹಿಂದೆ ಒಂದು ಚಿಕ್ಕ ಗುಡಿ ಇದ್ದು, ಇಂದು ಒಂದು ಬೃಹತ್ ಪ್ರಮಾಣದ ದೇವಸ್ಥಾನ ಉತ್ತರ ದಿಕ್ಕಿನಲ್ಲಿ ನಿರ್ಮಾಣವಾಗಿದೆ. ಮೂರ್ತಿಯ ಮುಖದ ಭಾಗವನ್ನು ಬೆಳ್ಳಿಯಿಂದ ಮಾಡಲಾಗಿದೆ. ತಲೆ ಹಿಂದಿನ ಭಾಗದಲ್ಲಿ ಏಳು ಹೆಡೆ ಹಾವಿನ ಸರ್ಪದ ಭಾಗವೂ ತಾಮ್ರ ಮತ್ತು ಕಂಚಿನಿಂದ ಮಾಡಲ್ಪಟ್ಟಿದೆ. ಪೂರ್ವಿ ಮಠವು ಕೂಡ ಇದೇ ದಿಕ್ಕಿಗೆ ಇತ್ತು. ಗೋಪುರವನ್ನು ಹೊಂದಿದ್ದು ದ್ವಾರಬಾಗಿಲು ಹೊಸದಾಗಿ ನಿರ್ಮಿಸಿದ ಚಿತ್ರ ಗೊಂಬೆಗಳನ್ನು ಹೊಂದಿದೆ. ಮಠದ ಮುಂಭಾಗದಲ್ಲಿ ಆವರಣವಿದೆ ಮತ್ತು ಕಲ್ಯಾಣ ಮಂಟಪವನ್ನು ಹೊಂದಿದೆ.