ಗ್ರಾಮೀಣ ಯುವಕರ ಉದ್ಯೋಗ ಕನಸು ಸಾಕಾರಗೊಳಿಸುವಲ್ಲಿ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ಮಹತ್ವದ ಪಾತ್ರ
ಗದಗ: ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ಯುವಕರ ಬದುಕಿನಲ್ಲಿ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ಹೊಸ ಹೊಳಪನ್ನು ಮೂಡಿಸಲಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದಕರ ಹೇಳಿದರು.
ಅವರು ಭಾನುವಾರ ಬೆಟಗೇರಿ ಎಚ್‌ಸಿಇಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಸಮಿತಿ ವತಿಯಿಂದ ಪ್ರಾರಂಭಿಸಲಾಗಿರುವ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿದರು. ಗದಗ ಜಿಲ್ಲೆಯ ಮೊದಲ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದು ನನ್ನ ಭಾಗ್ಯ. ಇಲ್ಲಿನ ಜನರು ಇಂದಿಗೂ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಇಂದು ಉದ್ಘಾಟನೆಗೊಂಡಿರುವ ಅಕಾಡೆಮಿ ಸಾಕಷ್ಟು ಮಹಾತ್ವಾಕಾಂಕ್ಷೆಯುಳ್ಳ ಕೆಲಸವಾಗಿದ್ದು, ಗ್ರಾಮೀಣ ಭಾಗದ ಯುವಕರಲ್ಲಿ ಉದ್ಯೋಗ ಪಡೆಯುವ ವೇಳೆಯಲ್ಲಿ ಎದುರಾಗುವ ಸಮಸ್ಯೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ರೀತಿಯ ಬಗ್ಗೆ ತಿಳಿಸುವ ಮೂಲಕ ಯುವಕರಲ್ಲಿ ಆತ್ಮವಿಶ್ವಾಸ ಮೂಡಿಸಿ, ದೇಶ ಸೇವೆಗೆ ಅಣಿಗೊಳಿಸುವುದು, ಅದಕ್ಕೆ ಬೇಕಾಗುವ ಸೂಕ್ತ ತರಬೇತಿ ನೀಡುವ ಮೂಲಕ ಗ್ರಾಮೀಣ ಯುವಕರ ಉದ್ಯೋಗ ಕನಸು ಸಾಕಾರಗೊಳಿಸುವಲ್ಲಿ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು.ಕರಿಯರ್ ಅಕಾಡೆಮಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಕಷ್ಟು ಜನ ಉದ್ಯೋಗವನ್ನು ಕೇಳಿಕೊಂಡು ಬರುತ್ತಾರೆ. ಅವರಲ್ಲಿ ಶೇ. 83 ಜನರು ಕೆಲಸದ ನಿರೀಕ್ಷೆಯಲ್ಲಿರುವ ಯುವಕರಿರುತ್ತಾರೆ. ಸಾಕಷ್ಟು ಸಾಮಾಜಿಕ ಬೆಳವಣಿಗೆ ಆಗುತ್ತಿದೆ. ಅದಕ್ಕೆ ನಮ್ಮ ಯುವಕರು ಹೊಂದಿಕೊಂಡು, ಕೌಶಲ್ಯ ಬೆಳೆಸಿಕೊಳ್ಳಬೇಕು. ಅಂದಾಗ ಅವರಿಗೆ ಉತ್ತಮ ಉದ್ಯೋಗಗಳು ಸಿಗಲಿವೆ. ಆ ರೀತಿಯಲ್ಲಿ ನಮ್ಮ ಕರಿಯರ್ ಅಕಾಡೆಮಿ ಕೆಲಸ ಮಾಡಲಿದೆ ಎಂದು ಹೇಳಿದರು.
ಮುಖ್ಯವಾಗಿ ಯುವಕರಿಗೆ ಉದ್ಯೋಗ ಕೊಡಿಸುದಷ್ಟೇ ಅಲ್ಲ, ಉದ್ಯೋಗ ಸಿಗಬೇಕಾದ ರೀತಿಯಲ್ಲಿ ಯುವಕರನ್ನು ಸಿದ್ದಗೊಳಿಸುವುದು ನಮ್ಮ ಅಕಾಡೆಮಿಯ ಮುಖ್ಯ ಗುರಿಯಾಗಿದೆ. ಇದು ಗದಗ ಜನರ ಮತ್ತು ಯುವಕರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದರು.
ಬಿ.ಬಿ. ಅಸೂಟಿ, ರವಿ ಮೂಲಿಮನಿ ಮುಂತಾದವರು ಮಾತನಾಡಿದರು. ಅಶೋಕ ಮಂದಾಲಿ, ಸಿದ್ದು ಪಾಟೀಲ ಹಾಗೂ ನಗರಸಭೆ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.