ಹು-ಧಾ ಮಹಾನಗರದ ಅಭಿವೃದ್ಧಿಗೆ ಅಧಿಕಾರಿಗಳು ಆದ್ಯತೆ ನೀಡಿ: ಸಚಿವ ಲಾಡ್ ಸೂಚನೆ

KannadaprabhaNewsNetwork |  
Published : Jul 31, 2024, 01:10 AM IST
ಹುಬ್ಬಳ್ಳಿಯ ಐಟಿ ಪಾರ್ಕ್‌ನಲ್ಲಿರುವ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಸಭಾಂಗಣದಲ್ಲಿ ಸಚಿವ ಸಂತೋಷ ಲಾಡ್‌ ಅಧ್ಯಕ್ಷತೆ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ಮುಂದಿನ 20 ವರ್ಷಗಳಲ್ಲಿ ಮಹಾ ನಗರ ಹೇಗೆ ಅಭಿವೃದ್ಧಿಯಾಗಬೇಕು ಎಂಬುದರ ಕುರಿತು ಯೋಜನೆ ರೂಪಿಸಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ- ಧಾರವಾಡ ಮಾದರಿ ನಗರಗಳಾಗಬೇಕು. ಆ ನಿಟ್ಟಿನಲ್ಲಿ ಮಹಾನಗರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಒತ್ತು ನೀಡಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿನ ಹೊಸೂರು ವೃತ್ತದ ಬಳಿಯ ಐಟಿ ಪಾರ್ಕ್‌‌ನ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹು-ಧಾ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಂದಿನ 20 ವರ್ಷಗಳಲ್ಲಿ ಮಹಾ ನಗರ ಹೇಗೆ ಅಭಿವೃದ್ಧಿಯಾಗಬೇಕು ಎಂಬುದರ ಕುರಿತು ಯೋಜನೆ ರೂಪಿಸಬೇಕು. ನಗರಗಳಲ್ಲಿ ಉತ್ತಮ ಕಾಮಗಾರಿಗಳು ನಡೆಯಬೇಕು. ಯಾವುದೇ ರೀತಿಯಲ್ಲಿ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡಬಾರದು. ಬೇರೆ ಬೇರೆ ರಾಷ್ಟ್ರಗಳನ್ನು ಹೇಗೆ ಅಭಿವೃದ್ಧಿ ಪಡಿಸಲಾಗಿದೆ ಎನ್ನುವುದರ ಬಗ್ಗೆ ಅಧಿಕಾರಿಗಳು ಅಧ್ಯಯನ ನಡೆಸಬೇಕಾಗಿದೆ. ಅಲ್ಲದೇ ಇಂದಿನ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಕೈಗಾರಿಕೋದ್ಯಮ ಮತ್ತು ವ್ಯಾಪಾರ, ವಹಿವಾಟು ಹೆಚ್ಚಾದಾಗ ಮಾತ್ರ ನಗರಗಳು ಅಭಿವೃದ್ಧಿ ಹೊಂದಲಿವೆ. ಆ ನಿಟ್ಟಿನಲ್ಲಿ ಸಂಪನ್ಮೂಲಗಳ ಬಳಕೆಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.

ಸಾರ್ವಜನಿಕರಿಗೆ ಕುಡಿಯುವ ನೀರು, ವಿದ್ಯುತ್, ಸಾರಿಗೆ ಸೇರಿದಂತೆ ವಿವಿಧ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ನಗರ ಪ್ರದೇಶಗಳಲ್ಲಿನ ಸ್ಲಂಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸ್ಲಂಗಳಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಕುರಿತು ಅಧಿಕಾರಿಗಳು ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಘನ‌ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಹೆಚ್ಚಿನ ಗಮನ ಹರಿಸಬೇಕು. ಪಾಲಿಕೆಯ ಅಧಿಕಾರಿಗಳು ಸರ್ಕಾರದ ಜಾಗಗಳ ಅತಿಕ್ರಮಣವಾಗಿರುವುದರ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಒಂದು ವೇಳೆ ಸರ್ಕಾರದ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿದ್ದರೆ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.

ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಮೇಯರ್‌ ರಾಮಣ್ಣ ಬಡಿಗೇರ, ಉಪಮೇಯರ್‌ ದುರ್ಗಮ್ಮ ಬಿಜವಾಡ, ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆಯ ಸದಸ್ಯರು, ಅಧಿಕಾರಿಗಳು, ಇತರರಿದ್ದರು.ಕೇರಳ ನೆರವಿಗೆ ಕೇಂದ್ರ ಧಾವಿಸಲಿ: ಲಾಡ್‌

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕೇರಳ ವಯನಾಡಿನಲ್ಲಿ ಅತ್ಯಂತ ದೊಡ್ಡ ವಿಪತ್ತು ನಡೆದಿದೆ. ಇದು ಬಹಳಷ್ಟು ನೋವು ತರಿಸಿದೆ. ಕೇಂದ್ರ ಸರ್ಕಾರ ಕೂಡಲೇ ಕೇರಳದ ನೆರವಿಗೆ ಧಾವಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿನ ಭೂಕುಸಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೇರಳದಲ್ಲಿ ಬಹುದೊಡ್ಡ ದುರಂತ ನಡೆದಿದೆ. ಕೇಂದ್ರ ಸರ್ಕಾರ ಅಲ್ಲಿನ ನೆರವಿಗೆ ತೆರಳಬೇಕು. ಬರೀ ಕೇರಳಕ್ಕೆ ಅಷ್ಟೇ ಅಲ್ಲ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಿಂದ ಸಾಕಷ್ಟು ಹಾಕಿಯಾಗಿದೆ.

ಯಾವ ರೀತಿ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೋ ಅದೇ ರೀತಿ ನಮ್ಮ ಭಾಗಕ್ಕೂ ನೀಡಬೇಕು ಎಂದು ಒತ್ತಾಯಿಸಿದರು.

ದೇಶ ಆರು ಜನರ ಕೈಯಲ್ಲಿ ಇದೆ ಎಂದು ಹೇಳಿಕೆ ನೀಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಲಾಡ್‌, ಅವರು ಹೇಳಿದ್ದು ನಿಜವೇ ಇದೆ.

ಒಲಿಂಪಿಕ್ಸ್‌ ಕ್ರೀಡೆ ಸರ್ಕಾರಕ್ಕೆ ಸಂಬಂಧಿಸಿದ್ದು. ಆದರೆ ಅಲ್ಲಿ ನೀತಾ ಅಂಬಾನಿ ಜಾಸ್ತಿ ಕಾಣಿಸುತ್ತಾರೆ. ಒಲಿಂಪಿಕ್ಸ್‌ನಲ್ಲಿ ಅವರೇ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಕಾಣುತ್ತಿದ್ದಾರೆ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದರೂ ಪ್ರೋಟೋಕಾಲ್‌ ಬೇಕಲ್ವಾ? ಅವರೇ ಯಾಕೆ ಆಯ್ಕೆಯಾದರು. ಬೇರೆ ಯಾರು ಇಲ್ವಾ ಎಂದು ಪ್ರಶ್ನಿಸಿದರು.

ಟೆಂಡರ್‌ನಲ್ಲಿ ಭಾಗವಹಿಸಿ ಸರ್ಕಾರದ ಯೋಜನೆಯಲ್ಲಿ ಭಾಗವಹಿಸಬಹುದು. ಆದರೆ ಸ್ವಯಂ ಪ್ರೇರಿತವಾಗಿ ಅದಾನಿ ಅವರಿಗೆ ಯಾಕೆ ಗುತ್ತಿಗೆ ಸಿಗುತ್ತಿದೆ. ವಿಮಾನ ನಿಲ್ದಾಣ, ಬಂದರು, ಸರ್ಕಾರ ಸಂಸ್ಥೆಗಳು ನೇರವಾಗಿ ಅವರ ಕೈಗೆ ಯಾಕೆ ಸಿಗುತ್ತಿವೆ? ಕಲ್ಲಿದ್ದಲು ಗಣಿಗಾರಿಕೆ ಕೂಡ ಅದಾನಿ ಗ್ರೂಪ್‌ ಪಾಲಾಗಿದೆ. ಅವರೇನು ಮೊದಲಿಂದಲೂ ಗಣಿಗಾರಿಕೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಸಚಿವ ಜಮೀರ್‌ ಅಹ್ಮದ ಹೇಳಿಕೆ ನಾನು ನೋಡಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆ ಬಗ್ಗೆ ಮುಖ್ಯಮಂತ್ರಿ , ಉಪಮುಖ್ಯಮಂತ್ರಿಗಳೇ ಮಾತನಾಡುತ್ತಾರೆ. ಅದರ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌