ಮಾಗಡಿ: ತಾಲೂಕಿನ ಕರ್ಲಹಳ್ಳಿ ಬಸವೇಶ್ವರಸ್ವಾಮಿ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಸಿಡಿಪಿಒ ಬಿ.ಎಲ್.ಸುರೇಂದ್ರ ಮತ್ತು ಪೊಲೀಸ್ ಸಿಬ್ಬಂದಿ ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.
ಸಕಲೇಶಪುರ ತಾಲೂಕಿನ ಹಬ್ಬಸಾಲೆ ಗ್ರಾಮದ ನಿವಾಸಿ ನಾರಾಯಣ ಮತ್ತು ಭಾಗ್ಯಮ್ಮ ದಂಪತಿಯ ಪುತ್ರ ಎಚ್.ಎನ್. ಶ್ರೀನಿವಾಸ ಅವರೊಂದಿಗೆ ಹಾಲುವಾಗಿಲು ತಾರೆಯರೆಪಾಳ್ಯ ಗ್ರಾಮದ 17 ವರ್ಷದ ಅಪ್ರಾಪ್ತೆ ಜತೆ ಮದುವೆ ನಿಶ್ಚಯವಾಗಿ ನ.9, 10ರಂದು ತಾಲೂಕಿನ ಕರ್ಲಹಳ್ಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಿಗದಿಪಡಿಸಲಾಗಿತ್ತು.ಹುಡುಗಿ ಮತ್ತು ಹುಡುಗನ ಕಡೆಯ ಸಂಬಂಧಿಕರು, ಸ್ನೇಹಿತರು ಮತ್ತು ಬಂದು ಮಿತ್ತರು ಕಲ್ಯಾಣ ಮಂಟಪಕ್ಕೆ ಬಂದು ಅರತಕ್ಷತೆಗೆ ತಯಾರಿ ನಡೆಸಿದ್ದರು. ಈ ನಡುವೆ ಮಕ್ಕಳ ಸಹಾಯವಾಣಿ ಸಂಖ್ಯೆ 112ಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಬಿ.ಎಲ್.ಸುರೇಂದ್ರ ಮೂರ್ತಿ ಅವರು ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಗಂಡು, ಹೆಣ್ಣಿನ ಕಡೆಯವರು ಕಾಲು ಕಿತ್ತಿದ್ದಾರೆ. ಕಲ್ಯಾಣ ಮಂಟಪ ಖಾಲಿಯಾಗಿದೆ.
ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಬಾಲಕಿಯ ಮನೆಗೆ ಹೋದ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರ ನಿವಾಸಕ್ಕೆ ತೆರಳಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವಂತೆ ತಂದೆ, ತಾಯಿ, ಹುಡುಗಿ, ಹುಡುಗನಿಗೆ ನೋಟಿಸ್ ನೀಡಿದ್ದಾರೆ. ಕರ್ಲಹಳ್ಳಿ ಬಸವೇಶ್ವರಸ್ವಾಮಿ ಸಮುದಾಯ ಭವನದ ಆಡಳಿತ ಮಂಡಳಿ ಹುಡುಗಿಯ ವಯಸ್ಸಿನ ಬಗ್ಗೆ ಮಾಹಿತಿ ಪಡೆಯದೆ ಸಮುದಾಯ ಭವನ ನೀಡಿದ್ದಕ್ಕೆ ಬಾಲ್ಯವಿವಾಹ ಕಾಯ್ದೆ ಅಡಿ ದೂರು ದಾಖಲಿಸುವ ಬಗ್ಗೆ ನೋಟಿಸ್ ನೀಡಲಾಗಿದೆ.ಕಾರ್ಯಚರಣೆಯ ವೇಳೆ ಮೇಲ್ವಿಚಾರಕಿ ಜಯಲಕ್ಷಮ್ಮ, ಮಕ್ಕಳ ಸಹಾಯವಾಣಿಯ ಅಭಿಲಾಷ್, ಪವಿತ್ರಾ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಪೋಟೋ 11ಮಾಗಡಿ1: ಮಾಗಡಿ ತಾಲೂಕಿನ ಕರ್ಲಹಳ್ಳಿ ಬಸವೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಬಾಲ್ಯ ವಿವಾಹ ತಡೆದಿರುವ ಅಧಿಕಾರಿಗಳು.