ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲ್‌ಪಿಜಿ ಪೂರೈಕೆ ಮಾಡಿದರೆ, ದುರ್ಬಳಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಬಂಕ್‌ಗಳಿಗೆ ಎಲ್‌ಪಿಜಿ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಖಾಸಗಿ ಎಲ್‌ಪಿಜಿ ಸ್ಟೇಷನ್‌ಗಳು ಶೇ.80ರಷ್ಟು ಬಂದ್ ಆಗಿವೆ. ಆದರೆ ಸರ್ಕಾರಿ ಗ್ಯಾಸ್ ಬಂಕ್‌ಗಳಾದ ಐಒಸಿಎಲ್, ಎಚ್‌ಪಿಸಿಗಳಲ್ಲಿ ಎಲ್‌ಪಿಜಿ ಸಮಸ್ಯೆ ಇಲ್ಲ. ಆದರೂ ಆಟೋಗಳು ಸರದಿ ಸಾಲಿನಲ್ಲಿ ನಿಂತು ಎಲ್‌ಪಿಜಿಗಾಗಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇದೆ.
ಮೈಸೂರು ರಸ್ತೆ, ಚಾಮರಾಜಪೇಟೆ, ನಾಗರಬಾವಿ, ಮಾಗಡಿ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ಕುಮಾರಸ್ವಾಮಿ ಲೇಔಟ್, ಸರ್ಜಾಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಸೇರಿದಂತೆ 28 ಕಡೆಗಳಲ್ಲಿ ಮಾತ್ರ ಸರ್ಕಾರಿ ಗ್ಯಾಸ್ ಬಂಕ್‌ಗಳು ಇವೆ. ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆಟೋಗಳು ಎಲ್‌ಪಿಜಿ ಅವಲಂಬಿಸಿವೆ. ಖಾಸಗಿ ಗ್ಯಾಸ್ ಬಂಕ್‌ಗಳಿಗೆ ಎಲ್‌ಪಿಜಿ ಸರಬರಾಜಾಗುತ್ತಿಲ್ಲ. ಇದರಿಂದಾಗಿ ಪ್ರತಿ ದಿನ ಸರ್ಕಾರಿ ಗ್ಯಾಸ್ ಬಂಕ್‌ಗಳಲ್ಲಿ ನೂರಾರು ಆಟೋಗಳು ಬೆಳಗ್ಗೆ 4 ಗಂಟೆಯಿಂದಲೇ ಗ್ಯಾಸ್‌ಗಾಗಿ ಕಾದು ನಿಲ್ಲುತ್ತಿವೆ. ಎರಡ್ಮೂರು ಗಂಟೆ ಕಾದರೂ ಫುಲ್ ಟ್ಯಾಂಕ್ ಗ್ಯಾಸ್ ಸಿಗುತ್ತಿಲ್ಲ. ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಕೆಲ ಆಟೋ ಚಾಲಕರು ಅಲವತ್ತುಕೊಂಡಿದ್ದಾರೆ.ಕರಗದ ಕ್ಯೂ: ಬಸವೇಶ್ವರ ನಗರದ ಮುಖ್ಯ ರಸ್ತೆಯಲ್ಲಿ ಎರಡು ಎಲ್‌ಪಿಜಿ ಗ್ಯಾಸ್ ಬಂಕ್‌ಗಳು ಸೋಮವಾರ ಬಂದ್ ಆಗಿದ್ದವು. ಸೂಪರ್ ಎಲ್‌ಪಿಜಿ ಸ್ಟೇಷನ್ ಮತ್ತು ಎಸ್ ಎ ಬಂಕ್‌ನಲ್ಲೂ ನೋ ಸ್ಟಾಕ್ ಬೋರ್ಡ್ ಹಾಕಲಾಗಿತ್ತು. ಮಾಗಡಿ ರಸ್ತೆಯ ಟೋಲ್‌ಗೇಟ್ ಭಾರತ್ ಎಲ್‌ಪಿಜಿ ಆಟೋ ಗ್ಯಾಸ್ ಬಂಕ್‌ನಿಂದ ಬಾಲಗಂಗಾಧರನಾಥ ಸ್ವಾಮೀಜಿ ಮೆಟ್ರೋ ಸ್ಟೇಷನ್‌ವರೆಗೂ ಗ್ಯಾಸ್‌ಗಾಗಿ ಆಟೋಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಬೆಳಗ್ಗೆ ಆರು ಗಂಟೆಯಿಂದಲೇ ಗ್ಯಾಸ್ ಬಂಕ್ ಸಿಬ್ಬಂದಿ ಗ್ಯಾಸ್ ಹಾಕುತ್ತಿದ್ದರೂ ಸರದಿ ಸಾಲು ಮಾತ್ರ ಕಡಿಮೆಯಾಗದ ಪರಿಸ್ಥಿತಿಯಿತ್ತು.
ಚಾಮರಾಜಪೇಟೆ ಭಾರತ್ ಪೆಟ್ರೋಲಿಯಂ ಎಲ್‌ಪಿಜಿ ಗ್ಯಾಸ್ ಬಂಕ್‌ನಲ್ಲಿಯೂ ಆಟೋಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಕೆಲವು ಖಾಸಗಿ ಬಂಕ್‌ಗಳಲ್ಲಿ ಪೆಟ್ರೋಲ್ 125ರಿಂದ 135 ರು.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಬಂಕ್‌ಗಳಲ್ಲಿ 90 ರು. ಒಳಗೆ ಸಿಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಸರ್ಕಾರಿ ಬಂಕ್‌ಗಳು ಕೇವಲ 28 ಇದ್ದು, ಸ್ವಲ್ಪ ಮಟ್ಟಿಗೆ ತೊಂದರೆ ಆಗುತ್ತಿದೆ. ಕೆಲವೆಡೆ ಕೇವಲ 5ರಿಂದ 6 ಲೀಟರ್ ಮಾತ್ರ ಕೊಡುತ್ತಿದ್ದು ಆಟೋ ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ ಎನ್ನುತ್ತಾರೆ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್.
ಆಸ್ಪತ್ರೆಯಲ್ಲಿದ್ದ ಪತ್ನಿ ವಿಡಿಯೋ ತೋರಿಸಿದ! ಆಸ್ಪತ್ರೆಯಲ್ಲಿದ್ದ ಪತ್ನಿಗೆ ವಿಡಿಯೋ ಕರೆ ಮಾಡಿ ಗ್ಯಾಸ್ ಬಂಕ್ ಸಿಬ್ಬಂದಿಗೆ ಸಾಕ್ಷ್ಯ ತೋರಿಸಿ ಗ್ಯಾಸ್ ಪಡೆಯಬೇಕಾದ ಅಮಾನವೀಯ ಘಟನೆ ಮಾಗಡಿ ರಸ್ತೆ ಟೋಲ್‌ಗೇಟ್ ನಲ್ಲಿ ನಡೆಯಿತು.