ಗದಗ: ಸಮಾನಮನಸ್ಕ ಅಟೋ ಚಾಲಕರು ಒಗ್ಗೂಡಿ ಶ್ರೀಶಕ್ತಿ ಫೌಂಡೇಶನ್ ಮೂಲಕ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡು ಸಮಾಜಸೇವೆಗೆ ಮುಂದಾಗಿರುವುದು ಹೆಮ್ಮೆಯ ವಿಷಯ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತಪ್ಪ ಹೊನ್ನಿನಾಯ್ಕರ ತಿಳಿಸಿದರು.ನಗರದ ನಟರಂಗ ಕಲ್ಚರಲ್ ಅಕಾಡೆಮಿ ಹಾಗೂ ಟ್ರಸ್ಟ್ ಕೇಂದ್ರದಲ್ಲಿ ಶ್ರೀಶಕ್ತಿ ಫೌಂಡೇಶನ್ ಉದ್ಘಾಟಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಸುರೇಶ ಕುಂಬಾರ ಮಾತನಾಡಿ, ಪರಿಸರ ರಕ್ಷಣೆಗೆ ಮತ್ತು ಆರೋಗ್ಯ ಸುಧಾರಣೆಯತ್ತ ಹೆಚ್ಚು ಗಮನ ನೀಡಬೇಕು ಎಂದರು. ಶ್ರೀಶಕ್ತಿ ಫೌಂಡೇಶನ್ ಅಧ್ಯಕ್ಷೆ ರಾಜೇಶ್ವರಿ ನೀಲಗಾರ ಮಾತನಾಡಿ, ನಮ್ಮ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವುದು. ಭಾರತೀಯ ಕ್ರೀಡೆಗಳನ್ನು ಬೆಳೆಸುವುದಲ್ಲದೇ ಎಲ್ಲ ಹಂತದ ಮಕ್ಕಳಿಗೆ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕಲೆಗಳನ್ನು ನುರಿತ ಹಾಗೂ ಅನುಭವಿ ಶಿಕ್ಷಕ- ಶಿಕ್ಷಕಿಯರಿಂದ ಕಲಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಡಾ. ನಂದಾ ಹನಬರಡಿ, ಡಾ. ಅರವಿಂದ ಕರಿಗಣ್ಣವರ, ಮಾಜಿ ಸೈನಿಕ ಸುಬೇದಾರ ಗುಳ್ಳಯ್ಯ ಮಾಲಗಿತ್ತಿಮಠ, ಮಲ್ಲಿಕಾರ್ಜುನ ಹೋಟಿ, ವೆಂಕಟೇಶ ಇಮರಾಪೂರ, ವಿಜಯಕುಮಾರ ಹಿರೇಮಠ, ಮಂಜುನಾಥ ಹಮ್ಮಿಗಿ, ಚಂದ್ರಶೇಖರ ದೊಡ್ಡಮನಿ, ಸುಮಲತಾ ಕುಬಸದ, ನವೀನಕುಮಾರ ಕಬ್ಬೂರ, ಶಶಾಂಕ ನವಲಗುಂದ, ಅಭಿಷೇಕ ನೀಲಗಾರ, ಗಣೇಶ ಸೇರಿದಂತೆ ಮುಂತಾದವರು ಇದ್ದರು. ಸಂತೋಷ ಜಾಲಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮಶೇಖರ ಚಿಕ್ಕಮಠ ನಿರೂಪಿಸಿದರು.