ಆಟೋ ಚಾಲಕನ ಇಬ್ಬರು ಮಕ್ಕಳಿಗೂ ಎಂಬಿಬಿಎಸ್ ಸೀಟು!

KannadaprabhaNewsNetwork |  
Published : Sep 30, 2026, 02:15 AM IST
 ಮಗನಿಗೆ ಮೆಡಿಕಲ್ ಸೀಟ್ ಸಿಕ್ಕಿದ್ದಂತೆ ಸಿಹಿ ತಿನಿಸುತ್ತಿರುವ ಆಟೋ ಚಾಲಕ  | Kannada Prabha

ಸಾರಾಂಶ

ಬೆಳಗ್ಗೆಯಿಂದ ರಾತ್ರಿ ವರೆಗೆ ಆಟೋ ಓಡಿಸುವ ಆಟೋ ಚಾಲಕನ ಮಕ್ಕಳಿಬ್ಬರಿಗೂ ಎಂಬಿಬಿಎಸ್ ಸೀಟು ಸಿಕ್ಕಿದೆ. ಆದರೆ, ಸಿಕ್ಕಿರುವ ಸಂತೋಷಕ್ಕಿಂತ ಮಕ್ಕಳಿಬ್ಬರ ಶುಲ್ಕ ಹೊರೆ ಚಿಂತೆಗೀಡು ಮಾಡಿದೆ.

2024 ರಲ್ಲಿ ಮಗಳಿಗೆ, ಈ ವರ್ಷ ಮಗನಿಗೆ ಸಾಧನೆಯ ಸಂಭ್ರಮದ ನಡುವೆಯೇ ಶುಲ್ಕದ ಹೊರೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳಬೆಳಗ್ಗೆಯಿಂದ ರಾತ್ರಿ ವರೆಗೆ ಆಟೋ ಓಡಿಸುವ ಆಟೋ ಚಾಲಕನ ಮಕ್ಕಳಿಬ್ಬರಿಗೂ ಎಂಬಿಬಿಎಸ್ ಸೀಟು ಸಿಕ್ಕಿದೆ. ಆದರೆ, ಸಿಕ್ಕಿರುವ ಸಂತೋಷಕ್ಕಿಂತ ಮಕ್ಕಳಿಬ್ಬರ ಶುಲ್ಕ ಹೊರೆ ಚಿಂತೆಗೀಡು ಮಾಡಿದೆ.ಇದು ಕೊಪ್ಪಳದ ಭಾಗ್ಯನಗರ ನಿವಾಸಿ, ಆಟೋ ಚಾಲಕ ಯಲ್ಲಪ್ಪ ಪಡಸಾಲಿ ಅವರ ಕುಟುಂಬದ ಸಾಧನೆ ಹಾಗೂ ಸಂಕಷ್ಟದ ಕಥೆ.ಯಲ್ಲಪ್ಪ ಅವರ ಪುತ್ರಿ ಜ್ಯೋತಿ ಪಡಸಾಲಿ 2024ರಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದು ಉಜಿರೆಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಸಾಲ ಮಾಡಿ ಶುಲ್ಕ ಪಾವತಿಸುತ್ತಿರುವ ತಂದೆಗೆ, ಇದೀಗ ಮತ್ತೊಂದು ದೊಡ್ಡ ಜವಾಬ್ದಾರಿ ಎದುರಾಗಿದೆ. 2026ರ ನೀಟ್ ಪರೀಕ್ಷೆಯಲ್ಲಿ ಪುತ್ರ ಮಂಜುನಾಥ್ 561ನೇ ರ‍್ಯಾಂಕ್ ಪಡೆದು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದಾನೆ. ಹೀಗಾಗಿ, ಒಂದೇ ಕುಟುಂಬದಲ್ಲಿ ಇಬ್ಬರು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುವ ಅಪರೂಪದ ಸಾಧನೆ ಮಾಡಿದ್ದಾರೆ.ಸರ್ಕಾರಿ ಶಾಲೆ... ರಿಯಾಯಿತಿ ಶಿಕ್ಷಣ:ಮಂಜುನಾಥ ಸರ್ಕಾರಿ ಆದರ್ಶ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದಿದ್ದಾನೆ. ಬಳಿಕ ಗ್ರಾಮದ ನವಚೇತನ ಪಿಯು ಕಾಲೇಜಿನಲ್ಲಿ ರಿಯಾಯಿತಿಯೊಂದಿಗೆ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಪಿಯುಸಿಯಲ್ಲಿ ಶೇ.95 ಅಂಕ ಗಳಿಸಿದ್ದ ಆತ, ನೀಟ್‌ನಲ್ಲೂ ಉತ್ತಮ ಸಾಧನೆ ಮಾಡಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾನೆ.ಮಕ್ಕಳಿಬ್ಬರ ಸಾಧನೆಯಿಂದ ತಂದೆ-ತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ. ಬಡತನದ ನಡುವೆಯೂ ಮಕ್ಕಳು ಜಾಣತನದಿಂದ ಓದಿ ವೈದ್ಯಕೀಯ ಸೀಟು ಪಡೆದಿರುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಯಲ್ಲಪ್ಪ. ಆದರೆ, ಈ ಸಂತೋಷದ ಹಿಂದೆ ಆರ್ಥಿಕ ಸಂಕಷ್ಟವೂ ಇದೆ.ಕಷ್ಟವಾದರೂ ಓದಿಸಿಯೇ ಓದಿಸುತ್ತೇನೆ:ಮಗಳ ಮೆಡಿಕಲ್ ಕಾಲೇಜಿನ ವಿದ್ಯಾಭ್ಯಾಸದ ಆರ್ಥಿಕ ಹೊರೆಯನ್ನು ಹೇಗೋ ನಿಭಾಯಿಸುತ್ತಿದ್ದೇವೆ. ಅದಕ್ಕಾಗಿ ಮಾಡಿರುವ ಸಾಲದ ಬಡ್ಡಿಯೂ ಹೊರೆಯಾಗಿದೆ. ಈ ನಡುವೆ ಮಗ ಮಂಜುನಾಥ್ ಕೂಡ ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದಾನೆ. ಮಕ್ಕಳ ಸಾಧನೆಯ ಸಂದರ್ಭದಲ್ಲಿ ನಮ್ಮ ಕಷ್ಟವನ್ನು ಅವರಿಗೆ ಹೇಳಬಾರದು ಎಂದು ನಿರ್ಧರಿಸಿ, ಮೈಸೂರಿನ ಮೆಡಿಕಲ್ ಕಾಲೇಜಿಗೆ ಪ್ರವೇಶ ಮಾಡಿಸಿದ್ದೇನೆ. ಎಷ್ಟೇ ಹೊರೆಯಾದರೂ ಮಕ್ಕಳನ್ನು ಓದಿಸಿಯೇ ಓದಿಸುತ್ತೇನೆ " ಎಂದು ಯಲ್ಲಪ್ಪ ಹೆಮ್ಮೆಯಿಂದ ಹೇಳುತ್ತಾರೆ.ನಿತ್ಯ ಆಟೋ ಓಡಿಸಿ ಬರುವ ಆದಾಯದಲ್ಲೇ ಕುಟುಂಬ ನಿರ್ವಹಣೆ, ಸಾಲದ ಮರುಪಾವತಿ ಹಾಗೂ ಇಬ್ಬರು ಮಕ್ಕಳ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸುವುದು ಯಲ್ಲಪ್ಪ ಅವರಿಗೆ ಸವಾಲಾಗಿದೆ. ಮಕ್ಕಳಿಬ್ಬರ ವೈದ್ಯರಾಗುವ ಕನಸು ನನಸಾಗಿಸಲು ತಂದೆಯೊಬ್ಬರು ಎದುರಿಸುತ್ತಿರುವ ಈ ಆರ್ಥಿಕ ಸಂಕಷ್ಟಕ್ಕೆ ನೆರವಿನ ಹಸ್ತ ಚಾಚುವವರು 7483804247ಸಂಖ್ಯೆಗೆ ಸಂಪರ್ಕಿಸಬಹುದು.ಮಕ್ಕಳಿಬ್ಬರಿಗೂ ಮೆಡಿಕಲ್ ಸೀಟು ಸಿಕ್ಕಿರುವುದು ಸಂತೋಷದ ಸಂಗತಿ. ಆದರೆ, ಆರ್ಥಿಕ ಸಂಕಷ್ಟವಿದೆ. ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸುತ್ತೇನೆ. ಸಹಾಯ ಸಿಕ್ಕರೆ ಪುಣ್ಯವಾಗುತ್ತದೆ ಎನ್ನುತ್ತಾರೆ ಆಟೋ ಚಾಲಕ ಯಲ್ಲಪ್ಪ ಪಡಸಾಲಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರ್ಮಿಕತೆ ಜತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಿ: ಸಚಿವ ಕೆ.ಎಸ್. ಬಸವಂತಪ್ಪ
ಮಾಜಿ ಸಂಸದ ಮಂಜುನಾಥ ಕುನ್ನೂರಗೆ ಕನ್ನಡದ ಕಟ್ಟಾಳು ಬಿರುದು ಪ್ರದಾನ