ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಿ: ಖಂಡ್ರೆ

KannadaprabhaNewsNetwork |  
Published : Mar 05, 2024, 01:31 AM IST
ಚಿತ್ರ 4ಬಿಡಿಆರ್57 | Kannada Prabha

ಸಾರಾಂಶ

ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎಲ್ಲ ಸೌಲಭ್ಯಗಳನ್ನು ಮನೆ-ಮನೆಗೆ ತಲುಪಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಹುಮನಾಬಾದ್: ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎಲ್ಲ ಸೌಲಭ್ಯಗಳನ್ನು ಮನೆ-ಮನೆಗೆ ತಲುಪಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಸೋಮವಾರ ಜಿಲ್ಲಾಡಳಿತದಿಂದ ಚಿಟಗುಪ್ಪಾ ಪಟ್ಟಣದ ರಘೋಜಿ ಫಂಕ್ಷನ್ ಹಾಲ್‌ನಲ್ಲಿ ಏರ್ಪಡಿಸಿದ ಸಾರ್ವಜನಿಕ ಕುಂದುಕೊರತೆಗಳ ಜನಸ್ಪಂದನಾ ಸಭೆ ಮತ್ತು 5 ಗ್ಯಾರಂಟಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 3.20 ಲಕ್ಷ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ 3.50 ಲಕ್ಷ ಜನರು ಉಚಿತ ವಿದ್ಯುತ್ ಯೋಜನೆ ಲಾಭ ಪಡೆಯುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 3.10 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರು 11.40 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು 18.55 ಕೋಟಿ ರು. ಡಿಬಿಟಿ ಮುಖಾಂತರ ಹಣ ಪಾವತಿಸಲಾಗಿದೆ.

ಶಕ್ತಿ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ 3 ಕೋಟಿ ಮಹಿಳೆಯರು ಉಚಿತ ಬಸ್ ಸಂಚಾರದ ಲಾಭ ಪಡೆದಿದ್ದಾರೆ. ಯುವನಿಧಿ ಯೋಜನೆಯಡಿಯಲ್ಲಿ 2 ಸಾವಿರ ವಿದ್ಯಾರ್ಥಿಗಳು ಯುವನಿಧಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಜನರ ವಿಶ್ವಾಸಕ್ಕೆ ಎಂದು ದ್ರೋಹ ಬಗೆದಿಲ್ಲ. ಬಡವರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಏಳಿಗೆಗೆ ಸದಾ ಬದ್ಧವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಬಲತೆ ಸೃಷ್ಟಿಯಾಗುವ ಮೂಲಕ ಆರ್ಥಿಕ ಗುಣಮಟ್ಟ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ರಹಿತವಾಗಿ ಗ್ಯಾರಂಟಿ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವುದರ ಮೂಲಕ ಗ್ಯಾರಂಟಿ ಸಮಾವೇಶ ಸಾರ್ಥಕ ಸಮಾವೇಶ ಆಗಿದೆ ಎಂದು ಹೇಳಿದರು.

ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಮಾತನಾಡಿ, ಬಡವರು, ವೃದ್ಧರು, ಹಿಂದುಳಿದವರಿಗಾಗಿ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ತಂದು ಅವರ ಮನೆ ಬಾಗಿಲಿಗೆ ತಲುಪುವಂತೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ಯೋಜನೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅವುಗಳನ್ನು ಸರಿಪಡಿಸಿ ಜನರಿಗೆ ಸರ್ಕಾರದ ಯೋಜನೆಯನ್ನು ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ತಲುಪದೆ ಇದ್ದರೆ, ಇನ್ನುಳಿದ ಚಿಟಗುಪ್ಪ ತಾಲೂಕಿನ ರೈತರ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಇಲ್ಲಿ ಪರಿಹರಿಸುವ ಇಲ್ಲವೇ ಅರ್ಜಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.

ಎಂಎಲ್ಸಿ ಚಂದ್ರಶೇಖರ ಬಿ.ಪಾಟೀಲ್ ಮಾತನಾಡಿ, ಗ್ಯಾರಂಟಿ ಸಮಾವೇಶಗಳನ್ನು ಮಾಡುವ ಮೂಲಕ ಸಾರ್ವಜನಿಕ ಸಮಸ್ಯೆಗಳನ್ನು ಸ್ಥಳದಲ್ಲಿ ಬಗೆಹರಿಸಲಾಗುತ್ತಿದೆ. ಇದರ ಲಾಭವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳಬೇಕೆಂದು ತಿಳಿಸಿದರು.

ನಂತರ ಸಚಿವರು ಸಾರ್ವಜನಿಕರ ಕುಂದಕೊರತೆಗಳ ಅರ್ಜಿಗಳನ್ನು ಸ್ವೀಕರಿಸಿ ವಿದ್ಯುಚ್ಛಕ್ತಿ ಸಂಪರ್ಕ, ಪಡಿತರ ಕಾರ್ಡ ತಿದ್ದುಪಡಿ ಸಮಸ್ಯೆಗಳು, ಮನೆ ಮಂಜೂರಾತಿ, ಭೂಮಿ ಮಂಜೂರಾತಿ, ರಸ್ತೆ ಒತ್ತುವರಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿ ಕೊಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿ.ಪಂ ಸಿಇಓ ಡಾ.ಗೀರಿಶ್ ದೀಲಿಪ್ ಬದೋಲೆ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಮ್.ಎಮ್, ಸಹಾಯಕ ಆಯುಕ್ತರಾದ ಪ್ರಕಾಶ ಸಾದೂರೆ, ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಸುರೇಖಾ, ತಹಸಿಲ್ದಾರ ರವೀಂದ್ರ ದಾಮಾ, ಡಿವೈಎಸ್‌ಪಿ ಜೆಎಸ್ ನ್ಯಾಮೇಗೌಡರ, ಪುರಸಭೆ ಮುಖ್ಯಾಧಿಕಾರಿ ಉಸಾಮೊದ್ದಿನ್ ಬಾಬಾ, ತಾಪಂ ಇಓ ಅಕ್ರಂಪಾಶಾ, ಸಿಪಿಐ ಶ್ರೀನಿವಾಸ ಅಲ್ಲಾಪೂರೆ, ಜೆಸ್ಕಾಂ ಎಇಇ ಅನೀಲಕುಮಾರ ಪಾಟೀಲ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವೇಗೌಡರು ನಮ್ಮ ಪಕ್ಷದಲ್ಲಿದ್ದರು - ಹುಷಾರು ಅಶೋಕ್, ನೀನೇ ಸತ್ತು ಹೋಗ್ತೀಯ : ಸಿಎಂ
ವಸುಂಧರಾ ಭೂಪತಿ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ