ವಿವಾದ್ ಸೆ ವಿಶ್ವಾಸ್ ಸ್ಕೀಮ್ ಪ್ರಯೋಜನ ಪಡೆಯಿರಿ

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ಶಿವಮೊಗ್ಗ: ಹತ್ತು ವರ್ಷಗಳಿಂದ ಆದಾಯ ತೆರಿಗೆ ಇಲಾಖೆಯು ಕೈಗೊಂಡಿರುವ ಜನಸ್ನೇಹಿ ಸುಧಾರಣೆ ಕ್ರಮಗಳಿಂದ ಗಮನಾರ್ಹ ಬದಲಾವಣೆಗಳು ಆಗಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಶಿವಮೊಗ್ಗ: ಹತ್ತು ವರ್ಷಗಳಿಂದ ಆದಾಯ ತೆರಿಗೆ ಇಲಾಖೆಯು ಕೈಗೊಂಡಿರುವ ಜನಸ್ನೇಹಿ ಸುಧಾರಣೆ ಕ್ರಮಗಳಿಂದ ಗಮನಾರ್ಹ ಬದಲಾವಣೆಗಳು ಆಗಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘ, ಆದಾಯ ತೆರಿಗೆ ಇಲಾಖೆ ಸಹಯೋಗದಲ್ಲಿ ಮಂಗಳವಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಾದ್ ಸೆ ವಿಶ್ವಾಸ್ ಸ್ಕೀಮ್ 2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದಾಯ ತೆರಿಗೆ ಇಲಾಖೆಯು ಇಂತಹ ಪ್ರಮುಖ ಜನಸ್ನೇಹಿ ಹಾಗೂ ಕರಾದಾತಸ್ನೇಹಿ ವ್ಯಾಜ್ಯ ಮುಕ್ತ ತೆರಿಗೆ ಸ್ಕೀಮ್ ಕಾರ್ಯಾಗಾರವನ್ನು ಎಸ್‌ಡಿಸಿಸಿಐ ಸಾರಥ್ಯದಲ್ಲಿ ನಡೆಸುತ್ತಿರುವುದು ಅಭಿನಂದನೀಯ. ತೆರಿಗೆದಾರರು ವಿವಾದ್ ಸೆ ವಿಶ್ವಾಸ್ ಸ್ಕೀಮ್ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ದಶಕಗಳಲ್ಲಿ ಆಗಿರುವ ಬದಲಾವಣೆಗಳಿಂದ ತೆರಿಗೆದಾರನಿಗೆ ಪ್ರಯೋಜನವಾಗಿದ್ದು, ಸರ್ಕಾರದ ಖಜಾನೆಗೆ ದಾಖಲೆ ಪ್ರಮಾಣದಲ್ಲಿ ನೇರ ತೆರಿಗೆ ಬಂದಿದೆ. ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಹಾಗೂ ಮೂಲಸೌಕರ್ಯದ ಅಭಿವೃದ್ಧಿಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಮುಂದೆಯೂ ಸಹ ಆದಾಯ ತೆರಿಗೆ ಇಲಾಖೆ ಜತೆಗೆ ಸಂಘ ಕೈಗೂಡಿಸುತ್ತದೆ ಎಂದು ತಿಳಿಸಿದರು.

ಆದಾಯ ತೆರಿಗೆ ಆಧಿಕಾರಿ ಎಚ್.ಸಿ.ವಾಗೀಶ್ ಮಾತನಾಡಿ, ತೆರಿಗೆದಾರರಿಗೆ ಸಿಗುವ ಪ್ರಯೋಜನ ಹಾಗೂ ರಿಯಾಯಿತಿ ಕುರಿತು ವಿವರಣೆ ನೀಡಿದರಲ್ಲದೆ, ವಿವಾದ್ ಸೆ ವಿಶ್ವಾಸ್ ಸ್ಕೀಮ್ ಪ್ರಯೋಜನಗಳ ತೆರಿಗೆದಾರರಿಗೆ ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲಾ ಸಿಎ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ವಿ.ರವೀಂದ್ರನಾಥ್, ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಅತ ಉರ್ ರೆಹಮಾನ್ , ಸಿ.ಎ.ಶರತ್ ಮಾತನಾಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್‌.ಮನೋಹರ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರು, ತೆರಿಗೆದಾರರು, ವಾಣಿಜ್ಯೋದ್ಯಮಿಗಳು, ಸನ್ನದು ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು ಮತ್ತಿತರರಿದ್ದರು.

Share this article